ಸುಪ್ರೀಂ ನಿಷೇಧವಿದ್ದರೂ ನಡೆದ ಜಲ್ಲಿಕಟ್ಟು

ಮದುರೈ,ಜ.15: ಜಲ್ಲಿಕಟ್ಟು ನಡೆಸಲು ಅನುಮತಿಗೆ ಆಗ್ರಹಿಸಿ ರಾಜ್ಯದ ವಿವಿಧೆಡೆಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ನಡುವೆಯೇ ರವಿವಾರ ಮದುರೈ ಜಿಲ್ಲೆಯ ಹಲವೆಡೆಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ನಿಷೇಧವನ್ನು ಉಲ್ಲಂಘಿಸಿ ಈ ಗೂಳಿಕ್ರೀಡೆಯನ್ನು ನಡೆಸಲಾಗಿದೆ.
ಜಿಲ್ಲೆಯ ಪಲಮೇಡು ಎಂಬಲ್ಲಿ ಪೂಜೆಯನ್ನು ಸಲ್ಲಿಸಿದ ಬಳಿಕ ದೇವಸ್ಥಾನದ ಆರು ಗೂಳಿಗಳನ್ನು ಜಲ್ಲಿಕಟ್ಟು ನಡೆಯುವ ಸ್ಥಳದ ಪ್ರವೇಶದ್ವಾರ ‘ವಡಿ ವಸಲ್ ’ಬಳಿ ಕರೆತರಲಾಗಿತ್ತು. ವಡಿ ವಸಲ್ ಸುತ್ತ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸುವ ಜೊತೆಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು.
ಗೂಳಿಗಳಿಗೆ ಕಟ್ಟಿದ್ದ ಹಗ್ಗಗಳನ್ನು ಬಿಚ್ಚಿದಾಗ ಪಲಮೇಡುವಿನಲ್ಲಿ ಉದ್ವಿಗ್ನ ಸ್ಥಿತಿ ತಲೆದೋರಿತ್ತು. ಪ್ರದೇಶದಲ್ಲಿ ರಕ್ಷಣೆಗಾಗಿ ನೂರಾರು ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಎಲ್ಲ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ಜಲ್ಲಿಕಟ್ಟು ಮೇಲಿನ ನಿಷೇಧವನ್ನು ವಿರೋಧಿಸಿ ಮನೆಗಳ ಮೇಲೆ ಕಪ್ಪು ಬಾವುಟಗಳನ್ನು ಹಾರಿಸಲಾಗಿತ್ತು.
ಆರು ಗೂಳಿಗಳನ್ನು ಪೂಜೆಗಾಗಿ ಸ್ಥಳಕ್ಕೆ ತರಲಾಗಿತ್ತು. ಮೊದಲಿಗೆ ಮೂರು ಗೂಳಿಗಳ ಹಗ್ಗಗಳನ್ನು ಸಂಘಟಕರು ಬಿಚ್ಚಿದ್ದರು. ಯಾವುದೇ ಗೂಳಿಯನ್ನು ವಡಿ ವಸಲ್ ಮೂಲಕ ಒಳಕ್ಕೆ ಬಿಟ್ಟಿರಲಿಲ್ಲ. ಹೀಗಾಗಿ ಇದನ್ನು ನಿಜಕ್ಕೂ ಜಲ್ಲಿಕಟ್ಟು ಎಂದು ಕರೆಯಲಾಗದು. ಗೂಲಿಗಳ ಮಾಲಕರನ್ನು ಪತ್ತೆ ಹಚ್ಚಲು ನಾವು ಪ್ರಯತ್ನಿಸುತ್ತಿದ್ದೇವೆ ಮತ್ತು ಕಾನೂನು ಕ್ರಮಗಳನ್ನು ಜರುಗಿಸುತ್ತೇವೆ ಎಂದು ಎಸ್‌ಪಿ ವಿಜಯೇಂದ್ರ ಎಸ್.ಬಿದರಿ ತಿಳಿಸಿದರು.
ಉಥಪನೈಕನೂರ್‌ನಲ್ಲಿ ಜಲ್ಲಿಕಟ್ಟು ನಡೆಸಿದ್ದಕ್ಕಾಗಿ ಮೂವರನ್ನು ಬಂಧಿಸಲಾಗಿದೆ. ಇದೇ ರೀತಿ ರಾಜ್ಯಾದ್ಯಂತ 40 ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದರು.
ತನ್ಮಧ್ಯೆ ರವಿವಾರ ನಗರ ವ್ಯಾಪ್ತಿಯಲ್ಲಿ ನಿಷೇಧವಿದ್ದರೂ ಸುಮಾರು 20 ಗೂಳಿಗಳನ್ನು ಬಿಡಲಾಗಿತ್ತು. ಪಳಂಗನಾಥಂ ಮತ್ತು ವಿಲಂಗುಡಿಯಲ್ಲಿಯೂ ಜಲ್ಲಿಕಟ್ಟು ನಡೆದಿದ್ದವು ಎಂದು ಮೂಲಗಳು ತಿಳಿಸಿದವು.







