ನೋಟು ರದ್ದತಿ ಮೋದಿಯ ಎದೆಗಾರಿಕೆಯ ದ್ಯೋತಕ: ಫ್ರಾನ್ಸ್

ಹೊಸದಿಲ್ಲಿ, ಜ.15: ಭಾರತದಲ್ಲಿ ಇತ್ತೀಚೆಗೆ ನಡೆದ ನೋಟು ಅಮಾನ್ಯತೆ ಪ್ರಕ್ರಿಯೆಯನ್ನು ಶ್ಲಾಘಿಸಿರುವ ಫ್ರಾನ್ಸ್, ಇದೊಂದು ಎದೆಗಾರಿಕೆಯ ನಿರ್ಧಾರವಾಗಿದ್ದು ತೆರಿಗೆ ತಪ್ಪಿಸುವಿಕೆ, ಭ್ರಷ್ಟಾಚಾರ ಮತ್ತು ಕಾಳಧನವನ್ನು ನಿಗ್ರಹಿಸುವಲ್ಲಿ ಪ್ರಧಾನಿ ಮೋದಿಗಿರುವ ದೃಢ ನಿಶ್ಚಯದ ನಿದರ್ಶನವಾಗಿದೆ ಎಂದು ತಿಳಿಸಿದೆ.
ಈ ನಿರ್ಧಾರದ ಹಿಂದಿರುವ ಎದೆಗಾರಿಕೆಯಿಂದ ಪ್ರಭಾವಿತನಾಗಿದ್ದೇನೆ. ಡಿಜಿಟಲ್ ಅರ್ಥ ವ್ಯವಸ್ಥೆಯ ನಿಟ್ಟಿನಲ್ಲಿ ಆರ್ಥಿಕತೆಯನ್ನು ಆಧುನೀಕರಣಗೊಳಿಸುವ ಕ್ರಮವಿದು. ಈ ಬೆಳವಣಿಗೆಗಳನ್ನು ಆಸಕ್ತಿಯಿಂದ ಗಮನಿಸುತ್ತಿದ್ದೇವೆ. ಭಾರತದ ಅರ್ಥವ್ಯವಸ್ಥೆಯು ಉದ್ಯಮಿಗಳಿಗೆ ಆಶಾದಾಯಕವಾಗಿದೆ. ಸರಕಾರವು ದೇಶದ ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸಲು ಕೈಗೊಂಡಿರುವ ಕ್ರಮದ ಮೇಲೆ ನಂಬಿಕೆಯಿದೆ ಎಂದರು. ಪಿಟಿಐ ಜೊತೆ ಮಾತನಾಡಿದ ಫ್ರಾನ್ಸ್‌ನ ವಿದೇಶ ವ್ಯವಹಾರ ಇಲಾಖೆಯ ಸಚಿವ ಜೀನ್ ಮಾರ್ಕ್ ಐರಾಲ್ಟ್ ತಿಳಿಸಿದ್ದಾರೆ. ವಿದೇಶದ ಬಂಡವಾಳ ಆಕರ್ಷಿಸುವ ನಿಟ್ಟಿನಲ್ಲಿ ಮೋದಿ ಕೈಗೊಂಡಿರುವ ಗಮನಾರ್ಹ ಸುಧಾರಣೆಗಳು ಸರಿಯಾದ ದಿಕ್ಕಿನಲ್ಲಿ ಕೈಗೊಂಡ ಸರಿಯಾದ ಕ್ರಮ ಎಂದು ಬಣ್ಣಿಸಿದ್ದಾರೆ. ‘ಮೇಕ್ ಇನ್ ಇಂಡಿಯಾ’ ಉಪಕ್ರಮವನ್ನು ಶ್ಲಾಘಿಸಿದ ಅವರು, ಫ್ರಾನ್ಸ್ ಭಾರತದ ಪ್ರಮುಖ ಸಹಭಾಗಿ ರಾಷ್ಟ್ರವಾಗಿ ಇರಲು ಬಯಸುತ್ತಿದೆ ಎಂದ ಅವರು, ಇದೇ ಸಂದರ್ಭ ಆಮದು-ರಫ್ತು ಪ್ರಕ್ರಿಯೆ ಸರಳಗೊಳಿಸುವ ಮೂಲ ತಮ್ಮ ನಡುವಿನ ವ್ಯಾಪಾರ ಪ್ರಕ್ರಿಯೆಯ ತಡೆಗೋಡೆಯನ್ನು ಕಡಿಮೆಗೊಳಿಸಿ, ಭಾರತದಲ್ಲಿ ನಡೆಯುತ್ತಿರುವ ಸುಧಾರಣಾ ಪ್ರಕ್ರಿಯೆಯಲ್ಲಿ ಯುರೋಪಿಯನ್ ಒಕ್ಕೂಟ ಪಾಲ್ಗೊಳ್ಳಲು ಉಭಯ ಪಕ್ಷಗಳು ಜಂಟಿ ಪ್ರಯತ್ನ ನಡೆಸಬೇಕು ಎಂದರು.'
ಭಾರತದಲ್ಲಿ ನಡೆಯುತ್ತಿರುವ ‘ವೈಬ್ರೆಂಟ್ ಗುಜರಾತ್’ ಮೇಳದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಫ್ರಾನ್ಸ್‌ನ ಸಚಿವರು, ಫ್ರಾನ್ಸಿನ ಸಂಸ್ಥೆಗಳು ಈಗಾಗಲೇ ಹೂಡಿಕೆ, ಅನ್ವೇಷಣೆ ಮತ್ತು ‘ಮೇಕ್ ಇನ್ ಇಂಡಿಯಾ’ ನೀತಿಯ ಮೂಲಕ ಭಾರತದಲ್ಲಿ ತಮ್ಮ ಅಸ್ತಿತ್ವವನ್ನು ಭರ್ಜರಿಯಾಗಿ ಪ್ರದರ್ಶಿಸುತ್ತಿವೆ ಎಂದರು. ಇದೇ ವೇಳೆ ಫ್ರಾನ್ಸಿನ ಸಂಸ್ಥೆಗಳು ‘ಮೇಕ್ ಇನ್ ಇಂಡಿಯಾ’ ನೀತಿಯನ್ನು ಪೂರ್ಣ ಪಾಲಿಸಿಕೊಂಡು ಬರುತ್ತಿರುವ ಕಾರಣ ದ್ವಿಪಕ್ಷೀಯ ವ್ಯಾಪಾರ ಸಂಬಂಧ ‘ಸಾಮಾನ್ಯಕಿಂತ ಹೆಚ್ಚಿನ ಮಟ್ಟದಲ್ಲಿ’ ಇದೆ. ಯುರೋಪಿಯನ್ ಒಕ್ಕೂಟ ಮತ್ತು ಭಾರತದ ನಡುವಿನ ವ್ಯಾಪಾರ ತಡೆಬೇಲಿ ಕಿರಿದಾಗಿಸಲು ನಮ್ಮ ಜಂಟಿ ಪ್ರಯತ್ನ ಸಾಗುವ ಅಗತ್ಯವಿದೆ ಎಂದೂ ಈ ಸಂದರ್ಭ ಅವರು ಹೇಳಿದರು.







