ಬಂಟ್ವಾಳ : ಗಾಂಜಾ ಮಾರಾಟ - ಇಬ್ಬರ ಬಂಧನ
ಬಂಟ್ವಾಳ, ಜ. 15: ಕಾಲೇಜು ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಮಂಗಳೂರು ಅಪರಾಧ ಪತ್ತೆ ದಳದ ಪೊಲೀಸರು ವಿಟ್ಲ ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿಟ್ಲ ಕಸಬಾ ಗ್ರಾಮದ ಮೇಗಿನಪೇಟೆ ನಿವಾಸಿ ಮುಹಮ್ಮದ್ ಅಶ್ರಫ್(22) ಹಾಗೂ ಕೇಪು ಗ್ರಾಮದ ನಿವಾಸಿ ಹನೀಫ್ ಯಾನೆ ಜೋಗಿ ಹನೀಫ್(35) ಬಂಧಿತ ಆರೋಪಿಗಳು.
ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಳಿ ಗಾಂಜ ಮಾರಾಟ ಮಾಡುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅಪರಾಧ ಪತ್ತೆ ದಳದ ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರಿಂದ 100 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾರದ ಹಿಂದೆ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ಯಾನದಲ್ಲಿ ಗಾಂಜಾ ಸರಬರಾಜು ಮಾಡುತ್ತಿದ್ದ ಶಾಫಿ ಮತ್ತು ಅರ್ಮಾನ್ ಎಂಬವರನ್ನು ಬಂಧಿಸಿದ್ದ ವಿಟ್ಲ ಪೊಲೀಸರು ಅವರಿಂದ 13 ಕೆ.ಜಿ. ಗಾಂಜಾ ವಶಕ್ಕೆ ಪಡೆದಿದ್ದರು. ಶಾಫಿ ಮತ್ತು ಅರ್ಮಾನ್ ವಿಚಾರಣೆಯ ವೇಳೆ ನೀಡಿದ ಮಾಹಿತಿಯಂತೆ ಇಂದು ಅಶ್ರಫ್ ಮತ್ತು ಹನೀಫ್‌ನನ್ನು ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಶಾಫಿ ಮತ್ತು ಅರ್ಮಾನ್‌ಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಪ್ರಮುಖ ಆರೋಪಿ ತಲೆ ಮರೆಸಿಕೊಂಡಿದ್ದು ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.







