ಸಖತ್ ಖುಷಿ ನೀಡಿದ ಶಾನ್, ಪಾಯಲ್ ದೇವ್ ರಸಸಂಜೆ
23ನೆ ವರ್ಷದ ಆಳ್ವಾಸ್ ವಿರಾಸತ್ ಗೆ ತೆರೆ

ಮೂಡುಬಿದಿರೆ (ಪುತ್ತಿಗೆ ವಿವೇಕಾನಂದ ನಗರ), ಜ.15: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಕಳೆದ ಮೂರು ದಿನಗಳಿಂದ ಪುತ್ತಿಗೆಯ ಶ್ರೀಮತಿ ವನಜಾಕ್ಷಿ ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆಯುತ್ತಾ ಬಂದಿದ್ದ 23ನೆ ವರ್ಷದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್-2017 ರವಿವಾರ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ತೆರೆ ಕಂಡಿತ್ತು. ಪಾಯಲ್ ದೇವ್ ಅವರಿಂದ ಆರಂಭಗೊಂಡ ಸಂಗೀತ ರಸಸಂಜೆಯಲ್ಲಿ ಬಾಲಿವುಡ್ ಗಾಯಕ ಶಾನ್ ಅವರ ಡಾನ್ ಚಲನಚಿತ್ರದ ಹಾಡು ಮೇ ಹೂಂ ಡಾನ್, ಕನ್ನಡ ಚಲನಚಿತ್ರ ಹುಡುಕಾಟದ ಏನೋ ಒಂಥರಾ... ಹಾಗೂ ಪರಿಚಯ ಚಿತ್ರದ ಕುಡಿ ನೋಟವೇ ಮನಮೋಹಕ... ಒಡನಾಟವೇ ಬಲು ರೋಚಕ...ಜಬ್ಸೆ ಮೇರಿ ನಯನಾ ಹಾಗೂ ತಾನು ಹಾಡಿದ ಮೊದಲ ಚಲನಚಿತ್ರದ ಹಾಡು ಸೇರಿದಂತೆ ಹಲವು ಹಾಡುಗಳನ್ನು ಹಾಡುವ ಮೂಲಕ ಜನಸ್ತೋಮವನ್ನು ಸಂಗೀತ ಲೋಕಕ್ಕೆ ಕರೆದೊಯ್ಯಿದರು.
2ನೆ ಕಾರ್ಯಕ್ರಮವಾಗಿ ಉಡುಪಿಯ ಲತಾಂಗಿ ಸ್ಕೂಲ್ ಆಪ್ ಮ್ಯೂಸಿಕ್‌ನ ಗಾರ್ಗಿ, ಅರ್ಚನಾ ಮತ್ತು ಸಮನ್ವಿ ಅವರಿಂದ ಗಾನಾರ್ಚನ ಪ್ರಸ್ತುತಗೊಂಡಿತು. ನಂತರ ಆಳ್ವಾಸ್ ವಿದ್ಯಾರ್ಥಿಗಳಿಂದ ನಡೆದ ನೃತ್ಯ ಸಂಭ್ರಮದಲ್ಲಿ ಚೆನ್ನೈನ ಶೀಲಾ ಉನ್ನಿಕೃಷ್ಣನ್ ನಿರ್ದೇಶನದಲ್ಲಿ 40 ವಿದ್ಯಾರ್ಥಿ ಕಲಾವಿದರಿಂದ ರತನಾಟ್ಯ-ಪುಷ್ಪಾಂಜಲಿ, ಪ್ರೀತಮ್ ಸಿಂಗ್ ನಿರ್ದೇಶನದಲ್ಲಿ 30 ವಿದ್ಯಾರ್ಥಿ ಕಲಾವಿದರಿಂದ ಮಣಿಪುರದ ಸ್ಟಿಕ್ ಡ್ಯಾನ್ಸ್ ಹಾಗೂ ಕೊಲಂಬೊ ಜಯಂಪತಿ ಭಂಡಾರ ನಿರ್ದೇಶನದಲ್ಲಿ 60 ವಿದ್ಯಾರ್ಥಿ ಕಲಾವಿದರಿಂದ ಶ್ರೀಲಂಕಾದ ಜನಪದ ನೃತ್ಯ ಅನಾವರಣಗೊಳ್ಳುವ ಮೂಲಕ ಮೂರು ದಿನಗಳ ಕಾಲ ನಡೆದ ಈ ವರ್ಷದ ಆಳ್ವಾಸ್ ವಿರಾಸತ್‌ಗೆ ತೆರೆ ಎಳೆಯಿತು. ಕಳೆದ 22 ವರ್ಷಗಳಲ್ಲಿ 4-5 ದಿನಗಳ ಕಾಲ ನಡೆಯುತ್ತಿದ್ದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಈ ಬಾರಿ ಮೂರು ದಿನಗಳಿಗೆ ಮಾತ್ರ ಸೀಮಿತವಾಗಿತ್ತು. ಅಲ್ಲದೆ ಆಳ್ವಾಸ್ ಕಾಲೇಜಿನ ಸಾಂಸ್ಕೃತಿಕ ತಂಡಗಳ ಕಾರ್ಯಕ್ರಮಗಳಿಗೆ ಹೆಚ್ಚಿನ ಮಾನ್ಯತೆಯನ್ನು ನೀಡಲಾಗಿತ್ತು.
ಅದರಂತೆ ವಿರಾಸತ್‌ನ ಮೊದಲ ದಿನ ಮೊದಲ ಕಾರ್ಯಕ್ರಮವಾಗಿ ಶಶಾಂಕ್ ಸುಬ್ರಹ್ಮಣ್ಯಂ (ಕೊಳಲು), ಪ್ರವೀಣ್ ಗೋಡ್ಕಿಂಡಿ (ಬಾನ್ಸುರಿ), ವಿದ್ವಾನ್ ಭಕ್ತವತ್ಸಲಂ (ಮೃದಂಗ) ಹಾಗೂ ಪಂಡಿತ್ ಶುಭಶಂಕರ್ ಬ್ಯಾನರ್ಜಿ (ತಬ್ಲಾ) ಸಹಯೋಗದಲ್ಲಿ ಪ್ರಥಮ ಸಮ್ಮಿಲನ ಕೊಳಲು-ಬಾನ್ಸುರಿ ಜುಗಲ್‌ಬಂದಿ ನಡೆದರೆ, 2ನೆ ಕಾರ್ಯಕ್ರಮವಾಗಿ ಭುವನೇಶ್ವರದ ಚಿತ್ರಸೇನ ಸ್ವೈನ್ ಅವರ ನಿರ್ದೇಶನದಲ್ಲಿ ಆಳ್ವಾಸ್‌ನ 55 ವಿದ್ಯಾರ್ಥಿ ಕಲಾವಿದರಿಂದ ಒರಿಸ್ಸಾದ ಗೋಟಿಪೂವಾ ನೃತ್ಯದೊಂದಿಗೆ ನೃತ್ಯ ವೈವಿಧ್ಯ, ಬೆಂಗಳೂರಿನ ಹರಿ ಮತ್ತು ಚೇತನಾ ನಿರ್ದೇಶನದಲ್ಲಿ 50 ವಿದ್ಯಾರ್ಥಿ ಕಲಾವಿದರಿಂದ ನಿಯೋ ಕಥಕ್ ನೃತ್ಯ: ಸಂಭ್ರಮ, ಗುಜರಾತ್‌ನ ಪೃಥ್ವಿ ಶಾ ನಿರ್ದೇಶನದಲ್ಲಿ 40 ವಿದ್ಯಾರ್ಥಿ ಕಲಾವಿದರಿಂದ ಗುಜರಾತಿನ ಹುಡೋ ರಾಸ್, ಬೆಂಗಳೂರಿನ ಮಂಟಪ ಪ್ರಭಾಕರ ಉಪಾಧ್ಯ ನಿರ್ದೇಶನದಲ್ಲಿ 35 ವಿದ್ಯಾರ್ಥಿ ಕಲಾವಿದರಿಂದ ಬಡಗು ಯಕ್ಷಗಾನ: ಮಧುಮಾಸದ ರೂಪಕ ನಂತರ ಕೇರಳದ 30 ಮುಸಲ್ಮಾನ ವಿದ್ಯಾರ್ಥಿ ಕಲಾವಿದರಿಂದ ಕೇರಳದ ಅರ್ಬನಮುಟ್ಟು ಕಾರ್ಯಕ್ರಮಗಳು ರಸದೌತಣ ನೀಡಿದ್ದವು.
ಆಳ್ವಾಸ್ ವಿರಾಸತ್‌ನ 2ನೆ ದಿನವಾದ ಶನಿವಾರ ಮೊದಲ ಕಾರ್ಯಕ್ರಮವಾಗಿ ಟ್ರಿನಿಟಿ ನಾದ ಮಾಧುರ್ಯ ಗಮನ ಸೆಳೆಯಿತು. ಸಿತಾರ್‌ನಲ್ಲಿ ಪುರ್ಬಯಾನ್ ಚಟರ್ಜಿ, ಯು.ರಾಜೇಶ್ ಅವರು ಮ್ಯಾಂಡೋಲಿನ್, ರಂಜಿತ್ ಬೇರಟ್, ಗುಲ್‌ರಾಜ್ ಸಿಂಗ್, ಮೋಹಿನಿ ಡೆ ಅವರು ಬೇಸ್ ಗಿಟಾರ್ ಹಾಗೂ ಭೂಷಣ್ ಪರ್ಚುರೆ ನಾದ ಮಾಧುರ್ಯಕ್ಕೆ ಸಾಥ್ ನೀಡಿದ್ದರು.







