ಸಂಶಯಾಸ್ಪದವಾಗಿ ಕಂಡ ಎಂದು ನಗ್ನಗೊಳಿಸಿ ಥಳಿಸಿದರು !
ಅನೈತಿಕ ಪೊಲೀಸ್ ಗಿರಿಯ ಪರಮಾವಧಿ
.jpg)
ತಿರುವನಂತಪುರಂ, ಜ.16: ಅನೈತಿಕ ಪೊಲೀಸ್ ಗಿರಿಯ ಪರಮಾವಧಿ ಎಂದು ಹೇಳಬಹುದಾದ ಘಟನೆಯೊಂದರಲ್ಲಿ ಗುಂಪೊಂದು ವ್ಯಕ್ತಿಯೊಬ್ಬನನ್ನು ವಿವಸ್ತ್ರಗೊಳಿಸಿ ಆತನಿಗೆ ಅಮಾನುಷವಾಗಿ ಥಳಿಸಿದ ಘಟನೆ ತ್ರಿಶೂರು ಜಿಲ್ಲೆಯ ಕೊಡುನಗಲ್ಲೂರಿನಿಂದ ಶನಿವಾರ ರಾತ್ರಿ ವರದಿಯಾಗಿದೆ.
ಪರಿಸರದಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದನೆಂಬ ನೆಪದಲ್ಲಿ ಪರಂಬಿಲ್ ಸಲಾಂ (47) ಎಂಬ ಆ ವ್ಯಕ್ತಿಯ ಮೇಲೆ ಗುಂಪು ಹಲ್ಲೆ ನಡೆಸಿದೆಯೆಂದು ಸ್ಥಳೀಯ ಎಸ್ಸೈ ರಾಜಗೋಪಾಲ್ ತಿಳಿಸಿದ್ದಾರೆ. ದುಷ್ಕರ್ಮಿಗಳು ಆತನ ಮೇಲೆ ಸತತ ಎರಡು ಗಂಟೆಗಳ ಕಾಲ ಹಲ್ಲೆ ನಡೆಸಿದ್ದರು. ಪೊಲೀಸರು ಸ್ಥಳಕ್ಕಾಗಮಿಸಿದಾಗ ಸಂಪೂರ್ಣ ನಗ್ನನಾಗಿದ್ದ ಸಲಾಂನನ್ನು ವಿದ್ಯುತ್ ಕಂಬವೊಂದಕ್ಕೆ ಕಟ್ಟಲಾಗಿತ್ತು. ನಂತರ ಆತನನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಗಿದೆ.
ಆತನ ಮೇಲಿನ ದಾಳಿಗೆ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಒಟ್ಟು ಎಂಟು ಮಂದಿ ದಾಳಿಕೋರರಿದ್ದರೆಂದು ಹೇಳಲಾಗಿದ್ದು ಸಲಾಂ ಮನೆಯೊಂದರ ಹತ್ತಿರ ಸಂಶಯಾಸ್ಪದವಾಗಿ ನಿಂತಿದ್ದನೆಂದು ಆತನ ಮೇಲೆ ಹಲ್ಲೆ ನಡೆಸಲಾಗಿದೆಯೆಂದು ಹೇಳಲಾಗಿದೆ. ಸಂತ್ರಸ್ತ ಈ ಬಗ್ಗೆ ಪೊಲೀಸ್ ದೂರು ದಾಖಲಿಸಿದ್ದಾನೆ. ತನ್ನ ಮೇಲೆ ಆರೋಪಿಗಳು ಕೋಲುಗಳು ಹಾಗೂ ಕಬ್ಬಿಣದ ರಾಡುಗಳಿಂದ ಹೊಡೆದಿದ್ದಾರೆಂದು ಆತ ದೂರಿನಲ್ಲಿ ತಿಳಿಸಿದ್ದಾನೆ. ದಾಳಿಯಲ್ಲಿ ಸಲಾಂ ಮೈತುಂಬಾ ಗಾಯಗಳಾಗಿದ್ದು ಆತನ ಹಲವು ಹಲ್ಲುಗಳೂ ಉದುರಿವೆ ಎಂದು ಹೇಳಲಾಗಿದೆ.
ಘಟನೆ ನಡೆದಾಗ ಅಲ್ಲಿ ಹಾಜರಿದ್ದ ಕೆಲ ಮಂದಿ ವೀಡಿಯೊ ಹಾಗೂ ಫೋಟೋಗಳನ್ನು ತೆಗೆದು ವಾಟ್ಸಪ್ ನಲ್ಲಿ ಹರಿಯ ಬಿಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.







