ಈ ಸೌದಿ ಮಾರುಕಟ್ಟೆಗೆ ‘ಮೃತರ ಸೂಕ್’ ಎಂಬ ಹೆಸರೇಕೆ ?
ಇಲ್ಲಿದೆ ಈ ವಿಶೇಷ ಮಾರ್ಕೆಟ್ ನ ಹಿಂದಿನ ಸತ್ಯ

ಜಿದ್ದಾ, ಜ.16: ಸೌದಿ ಅರೇಬಿಯಾದ ಕರಾವಳಿ ನಗರವಾದ ಜಿದ್ದಾದಲ್ಲೊಂದು ಸೂಕ್ ಆಫ್ ದಿ ಡೆಡ್ (ಮೃತರ ಸೂಕ್) ಎಂಬ ಹೆಸರಿನ ಪ್ರಖ್ಯಾತ ಮಾರುಕಟ್ಟೆಯಿದೆ. ಈ ಮಾರುಕಟ್ಟೆಗೆ ಈ ವಿಚಿತ್ರ ಹೆಸರೇಕೆ ಬಂತು ಅಂತೀರಾ ? ಇಲ್ಲಿ ಮಾರಾಟವಾಗುವುದು ಸತ್ತು ಹೋಗಿರುವ ವ್ಯಕ್ತಿಗಳ ಬಟ್ಟೆ ಬರೆಗಳು.
ಜಿದ್ದಾದ ಅಲ್-ಸವಾರಿಖ್ ಮಾರುಕಟ್ಟೆಯೊಳಗಡೆಯೇ ಈ ಸೂಕ್ ಆಫ್ ದಿ ಡೆಡ್ ಮಾರುಕಟ್ಟೆಯಿದೆ. ಇತ್ತೀಚೆಗೆ ಮೃತಪಟ್ಟವರ ಬಟ್ಟೆಬರೆಗಳನ್ನುಅವರ ಸಂಬಂಧಿಕರೇ ಈ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ನೀಡಿದ್ದಾರೆ. ಮಾರಾಟಗಾರರು ಈ ಬಟ್ಟೆಗಳನ್ನು ಪ್ರತಿಯೊಂದಕ್ಕೆ ಐದರಿಂದ 20 ಸೌದಿ ರಿಯಾಲ್ ಮೊತ್ತಕ್ಕೆ ಮಾರುತ್ತಾರೆ.
ಈ ಮಾರುಕಟ್ಟೆಯಲ್ಲಿ ಖರೀದಿಗಾಗಿ ಬರುವ ಹೆಚ್ಚಿನವರು ಕಡಿಮೆ ಆದಾಯವಿರುವ ಏಷ್ಯಾ ಖಂಡದ ವಲಸಿಗರು ಇಲ್ಲವೇ ಆಫ್ರಿಕನ್ನರಾಗಿರುತ್ತಾರೆ. ಮಾರಾಟ ಮಾಡಲಾಗುವ ಬಟ್ಟೆಬರೆಗಳಲ್ಲಿ ಕೆಲವು ವಿಲಾಸಿ ಬ್ರ್ಯಾಂಡಿನ ಬಟ್ಟೆಬರೆಗಳೂ ಇರುವುದರಿಂದಲೇ ಅವುಗಳನ್ನು ಖರೀದಿಸಲು ಕೆಲವರು ಇಲ್ಲಿಗೆ ಬರುತ್ತಾರೆಂದು ಹೇಳಲಾಗಿದೆ. ಕೆಲವೊಮ್ಮೆ ಕೆಲ ಕಂಪೆನಿಗಳ ಹೆಚ್ಚಳವಾದ ಸ್ಟಾಕ್ ಗಳನ್ನೂ ಇಲ್ಲಿ ಮಾರಾಟ ಮಾಡಲಾಗುತ್ತದೆ.
ತರುವಾಯ ಜಿದ್ದಾದ ಅಲ್-ಸವಾರಿಖ್ ಮಾರುಕಟ್ಟೆ ವಿಶ್ವದ ಅತ್ಯಂತ ದೊಡ್ಡ ಮಾರುಕಟ್ಟೆಯೆಂದು ಹೆಸರುವಾಸಿಯಾಗಿದ್ದು 10 ಲಕ್ಷ ಚದರ ಮೀಟರ್ ವ್ಯಾಪ್ತಿಯಲ್ಲಿ ಹರಡಿದೆಯಲ್ಲದೆ ಇಲ್ಲಿ 15,000ಕ್ಕೂ ಅಧಿಕ ಸ್ಟಾಲುಗಳಿವೆ. ಇವುಗಳ ಹೊರತಾಗಿ ಹಳೆಯ ಲೋಹದ ವಸ್ತುಗಳನ್ನೂ ಇಲ್ಲಿ ಮಾರಾಟ ಮಾಡುವ 1,000 ಸ್ಟಾಲುಗಳಿವೆ. ಈ ಮಾರುಕಟ್ಟೆ ಕಳೆದ ಮೂರು ದಶಕಗಳಿಂದ ಕಾರ್ಯಾಚರಿಸುತ್ತಿದ್ದು ದಕ್ಷಿಣ ಜಿದ್ದಾದ ಮಿಲಿಟರಿ ನೆಲೆಯ ಸಮೀಪವಿರುವುದರಿಂದ ಮಾರುಕಟ್ಟೆಯ ಹೆಸರು ಅಲ್-ಸವಾರಿಖ್ ಎಂದಾಗಿದೆ.







