ಫೆ.12: ಯೆನೆಪೊಯದಿಂದ ‘ಕ್ಯಾನ್ಸರ್ಥಾನ್ 17- ‘ಮಂಗಳೂರು ಅರ್ಧ ಮ್ಯಾರಥಾನ್’
ಮಂಗಳೂರು, ಜ.16: ಯೆನೆಪೊಯ ವಿಶ್ವವಿದ್ಯಾನಿಲಯದ ಬೆಳ್ಳಿ ಹಬ್ಬದ ಅಂಗವಾಗಿ ‘ಕ್ಯಾನ್ಸರ್ಥಾನ್ 17- ‘ಮಂಗಳೂರು ಅರ್ಧ ಮ್ಯಾರಥಾನ್’ ಕಾರ್ಯಕ್ರಮವನ್ನು ಫೆ.12ರಂದು ಬೆಳಗ್ಗೆ 6 ಗಂಟೆಗೆ ನಗರದ ಫಿಝ್ಝೆ ಮಾಲ್‌ನಿಂದ ಹಮ್ಮಿಕೊಳ್ಳಲಾಗಿದೆ ಎಂದು ಕ್ಯಾನ್ಸರ್ಥಾನ್ 17ರ ಅಧ್ಯಕ್ಷ ಡಾ. ಹಸನ್ ಸರ್ಫರಾಝ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೆನೆಪೊಯ ವಿಶ್ವವಿದ್ಯಾನಿಯದ ವತಿಯಿಂದ ನಗರವನ್ನು ಆರೋಗ್ಯವಂತ ನಗರವನ್ನಾಗಿಸಲು ‘ಕ್ಯಾನ್ಸರ್ಥಾನ್ 17-ಎಫೈಟ್ ಅಗೈನೆಸ್ಟ್ ಕ್ಯಾನ್ಸರ್’ ಎಂಬ ವಿಷಯದಡಿ ಈಗಾಗಲೇ ಪ್ರಾರಂಭವಾಗಿ ಫೆ.11ರವರೆಗೆ ಮಂಗಳೂರು ನಗರದ 6 ಲಕ್ಷ ಜನರಲ್ಲಿ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ 4 ಸಾವಿರಕ್ಕೂ ಹೆಚ್ಚು ಜನರಲ್ಲಿ ಈ ರೋಗದ ಬಗ್ಗೆ ಯಾವುದಾದರೂ ಲಕ್ಷಣವಿದೆಯೇ? ಎಂದು ಪರೀಕ್ಷಿಸುವ ಕಾರ್ಯವನ್ನು ನಿರ್ವಹಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ ಎಂದರು.
ಇದೊಂದು ಬಹುದೊಡ್ಡ ಸ್ಪರ್ಧಾತ್ಮಕ ಕಾರ್ಯವಾಗಿದೆ. ಈ ಪ್ರಯತ್ನವು ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಜನರಲ್ಲಿ ಈ ರೋಗದ ವಿರುದ್ಧ ಹೋರಾಡಲು ಹಾಗೂ ಕಾಯಿಲೆಯ ಬಗ್ಗೆ ಸಂಶೋಧನೆ ನಡೆಸಲು ನಿಧಿಯನ್ನು ಸಂಗ್ರಹಿಸುವ ಉದ್ದೇಶವನ್ನು ಹೊಂದಿದೆ. ಕ್ಯಾನ್ಸರ್ ರೋಗವು ಮಾರಣಾಂತಿಕ ರೋಗವಾಗಿದ್ದು, ಸುಮಾರು 8.2 ಮಿಲಿಯನ್ ಸಾವಿಗೆ ಕಾರಣವಾಗಿದೆ. ಸುಮಾರು 9.5 ಲಕ್ಷ ಭಾರತೀಯರು ಈ ರೋಗದಿಂದ ಬಾಧಿತರಾಗಿದ್ದಾರೆ. ದೇಶದಲ್ಲಿ ಸ್ತನ ಕ್ಯಾನ್ಸರ್ (ಶೇ.14.3), ಗರ್ಭಕೋಶದ ಕ್ಯಾನ್ಸರ್(ಶೇ.12.1) ಮತ್ತು ಬಾಯಿಯ ಕ್ಯಾನ್ಸರ್(ಶೇ.7.6) ರೋಗಗಳು ಸಾಮಾನ್ಯವಾಗಿವೆ. ಇನ್ನು 20 ವರ್ಷಗಳಲ್ಲಿ ಭಾರತದಲ್ಲಿ ಕ್ಯಾನ್ಸರ್ ರೋಗವು ಇಮ್ಮಡಿಯಾಗಬಹುದೆಂದು ಗ್ಲೋಬೊಕಾನ್ ಪ್ರೊಜೆಕ್ಟ್ ಹೇಳಿದೆ ಎಂದು ತಿಳಿಸಿದರು.
ಮ್ಯಾರಥಾನ್‌ನಲ್ಲಿ ಭಾಗವಹಿಸಲು ಮೊ.9845083778, 9916263577 ಹಾಗೂ www.cancerthonmangalore.com ನ್ನು ಸಂಪರ್ಕಿಸಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ಡಾ. ಸಂದೀಪ್ ಶೆಟ್ಟಿ, ಡಾ. ಮನೋಜ್‌ಸಿಂಗ್, ಡಾ.ಝುಯೀಸ್ ಮತ್ತಿತರರು ಉಪಸ್ಥಿತರಿದ್ದರು.







