ಕೇಂದ್ರ ಸಾರಿಗೆ ಪ್ರಾಧಿಕಾರದಿಂದ ಪರವಾನಿಗೆ, ನೋಂದಣಿ ಶುಲ್ಕ ಏರಿಕೆ : ಬಿಎಂಎಸ್ ರಿಕ್ಷಾ ಚಾಲಕರ ಪ್ರತಿಭಟನೆ

ಪುತ್ತೂರು,ಜ.16: ಹೊಸ ರಿಕ್ಷಾ ಖರೀದಿ ನೋಂದಣಿ, ಮತ್ತು ಚಾಲನಾ ಪರವಾನಿಗೆ, ಪರವಾನಿಗೆ ನವೀಕರಣ ಹಾಗೂ ದಂಡದ ಮೊತ್ತದ ಶುಲ್ಕವನ್ನು ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರದ ಧೋರಣೆಯನ್ನು ವಿರೋಧಿಸಿ ಬಿಎಂಎಸ್ ಅಟೋರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಸೋಮವಾರ ಪುತ್ತೂರು ಬಸ್ಸು ನಿಲ್ದಾಣದ ಬಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಸಭೆಯಲ್ಲಿ ಬಿಎಂಎಸ್ ಅಟೋರಿಕ್ಷಾ ಮಾಲಕ ಚಾಲಕರ ಸಂಘದ ಗೌರವ ಅಧ್ಯಕ್ಷ ಡಾ. ಪ್ರಸಾದ್ ಭಂಡಾರಿ ಮಾತನಾಡಿ ಬಡ ರಿಕ್ಷಾ ಚಾಲಕರು ಈಗಾಗಲೇ ಸಂಕಷ್ಟದಲ್ಲಿದ್ದು ಕೇಂದ್ರದ ಮೋದಿ ಸರ್ಕಾರ ಇದೀಗ ರಿಜಿಸ್ಟ್ರೇಷನ್, ಫಿಟ್‌ನೆಸ್ ಸರ್ಟಿಫಿಕೇಟ್ ಇನ್ನಿತರ ವಿಷಯಗಳಲ್ಲಿ ದುಪ್ಪಟ್ಟು ದರ ಏರಿಕೆಯನ್ನು ಮಾಡಿರುವುದು ಸರಿಯಲ್ಲ. ರಿಕ್ಷಾ ಚಾಲಕರಿಗೆ ಟ್ಯಾಕ್ಸ್ ಕಟ್ಟಿ ಜೀವನ ನಿರ್ವಹಣೆ ಮಾಡುತ್ತಿರುವುದೇ ಕಷ್ಟವಾಗಿರುವಾಗ ಅವರ ಮೇಲೆ ಇಂತಹ ದರ ಏರಿಕೆಯ ಪ್ರಹಾರ ನಡೆಸಿರುವುದು ಬೇಸರದ ವಿಚಾರ. ಇದನ್ನು ತಕ್ಷಣವೇ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಪ್ರದಾನಿ ಮೋದಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಗೊತ್ತಿಲ್ಲದೆ ಇಲಾಖೆಯ ಐಎಎಸ್ ಅಧಿಕಾರಿಗಳು ಈ ಹೇರಿಕೆಯನ್ನು ಮಾಡಿ ಅವರ ಮುಂದಿರಿಸಿದ್ದಾರೆ. ಗೊತ್ತಿಲ್ಲದೆ ಪ್ರದಾನಿ ಮತ್ತು ಸಚಿವರು ಇದನ್ನು ಪಾಸ್ ಮಾಡಿದ್ದಾರೆ. ಮೋದಿಗೆ ಬಡವರ ಬಗ್ಗೆ ತುಂಬಾ ಕಾಳಜಿಯಿದೆ ಅವರು ಬಡವರ ವಿರೋಧಿಯಲ್ಲ ಎಂದ ಅವರು ಈ ಬಗ್ಗೆ ತಾನು ಪ್ರದಾನಿಗೆ ಮತ್ತು ಸಾರಿಗೆ ಸಚಿವರಿಗೆ ವೈಯಕ್ತಿಕ ಪತ್ರ ಬರೆದು ಸಮಸ್ಯೆಯನ್ನು ಮನವರಿಕೆ ಮಾಡುವುದಾಗಿ ತಿಳಿಸಿದರು.
ಈಗಾಗಲೇ ಪುತ್ತೂರಿನಲ್ಲಿ 3.5 ಸಾವಿರಕ್ಕೂ ಅಧಿಕ ಆಟೋರಿಕ್ಷಾಗಳು ಓಡಾಟ ನಡೆಸುತ್ತಿದೆ. ಈ ಹಿನ್ನಲೆಯಲ್ಲಿ ಇನ್ನು ಹೆಚ್ಚಿಗೆ ಅಟೋಗಳಿಗೆ ಅವಕಾಶ ನೀಡಬಾರದು. ಅಲ್ಲದೆ ಕೆಎಸ್ಸಾರ್ಟಿಸಿಯಿಂದ ಸಿಟಿಬಸ್ಸುಗಳ ಓಡಾಟ ಆರಂಭಿಸಿದಲ್ಲಿ ಬಡ ರಿಕ್ಷಾ ಚಾಲಕರಿಗೆ ಇನ್ನಷ್ಟು ಸಮಸ್ಯೆಯಾಗಲಿದೆ. ಇದರಿಂದಾಗಿ ಇದನ್ನು ತಡೆಯಬೇಕು. ರಿಕ್ಷಾ ಚಾಲಕರಿಗೆ ಇಎಸ್‌ಐ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದರು.
ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್ ಮಾತನಾಡಿ ಎಲ್ಲದಕ್ಕೂ ಟ್ಯಾಕ್ಸ್ ಹಾಕಿ ಜನರಿಗೆ ತೊಂದರೆ ಮಾಡುತ್ತಿರುವ ಸರ್ಕಾರವು ಮುಂದೆ ಊಟಕ್ಕೂ ಟ್ಯಾಕ್ಸ್ ಹಾಕುವ ಅಪಾಯವಿದೆ. ನಮ್ಮ ಸಮಸ್ಯೆಯನ್ನು ರಾಜ್ಯ ಸರ್ಕಾರವು ಕೇಂದ್ರಕ್ಕೆ ಮನವರಿಕೆ ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಬಂದ್ ನಡೆಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಬಿಎಂಎಸ್ ತಾಲೂಕು ಅಧ್ಯಕ್ಷ ರಂಜನ್ ಬನ್ನೂರು ಮಾತನಾಡಿ ರಿಕ್ಷಾ ಚಾಲಕರ ಬಗ್ಗೆ ಕೇಂದ್ರಕ್ಕಾಗಲೀ ರಾಜ್ಯಕ್ಕಾಗಲೀ ಯಾವುದೇ ಕಾಳಜಿಯಿಲ್ಲ. ಎಲ್ಲರೂ ನಮ್ಮನ್ನು ಕೀಳಾಗಿ ನೋಡ್ತಾರೆ. ನಮ್ಮಿಂದ ಕೋಟ್ಯಾಂತರ ರೂಪಾಯಿ ತೆರಿಗೆ ಸಂಗ್ರಹಿಸುತ್ತಿರುವ ಸರ್ಕಾರಗಳು ನಮ್ಮ ನೋವನ್ನು ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ದೂರಿದರು.
ಪ್ರತಿಭಟನಾಕಾರರು ರಿಕ್ಷಾ ಚಾಲಕರಿಗೆ ಇಎಸ್‌ಐಯ ಮೆಡಿಕಲ್ ಸವಲತ್ತು ಯೋಜನೆ ಜಾರಿಗೆ ತರಬೇಕು, ಸಾರಿಗೆ ದರವನ್ನು ಪರಿಷ್ಕರಿಸಿ, ಹೊಸ ದರದಿಂದ ರಿಯಾಯಿತಿ ಮಾಡಬೇಕು. ರಿಯಾಯಿತಿ ದರದಲ್ಲಿ ಇನ್ಸೂರೆನ್ಸ್ ಪಾಲಿಸಿ ಒದಗಿಸಬೇಕು ಎಂದು ಉಪವಿಭಾಗಾಧಿಕಾರಿಗಳು ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳ ಮೂಲಕ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ದೇವಪ್ಪ ಗೌಡ, ಸುರೇಶ್ ಸುಧಾಕರ್ ನಾಯಕ್, ಮೋಹನ್ ಗೌಡ, ಹುಸೈನ್, ಸತೀಶ್ ಮಣಿಯ, ಮಹೇಶ್ ಮಣಿಯ, ಅರುಣ್ ಕುಮಾರ್ ಪುತ್ತಿಲ ಮತ್ತಿತರರು ಉಪಸ್ಥಿತರಿದ್ದರು.







