ರೈತರ ಸಾಲ ಮರುಪಾವತಿಯ ಅವಧಿ ವಿಸ್ತರಣೆಯಾಗಬೇಕು: ಡಾ. ರಾಜೇಂದ್ರ ಪ್ರಸಾದ್
ರಾಜ್ಯಮಟ್ಟದ ವಿಶೇಷ ಕಾರ್ಯಾಗಾರ ಉದ್ಘಾಟನೆ

ಮಂಗಳೂರು, ಜ.16: ಹದಗೆಟ್ಟಿರುವ ದೇಶದ ಆರ್ಥಿಕ ಪರಿಸ್ಥಿತಿಯ ಮಧ್ಯೆ ರೈತರ ವಿವಿಧ ಸಾಲ ಮರುಪಾವತಿಯ ಅವಧಿಯನ್ನು ಫೆಬ್ರವರಿಯವರೆಗೆ ವಿಸ್ತರಿಸಲಾಗಿದೆ. ಆದರೆ ಈ ಅವಧಿಯನ್ನು ಇನ್ನೂ ಎರಡು ತಿಂಗಳು ವಿಸ್ತರಿಸಬೇಕು ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅಭಿಪ್ರಾಯಪಟ್ಟರು.
ದೇಶದಲ್ಲಿ ಬದಲಾದ ಆರ್ಥಿಕ ಸನ್ನಿವೇಶದಲ್ಲಿ ಸಹಕಾರ ಸಂಘಗಳು ಎದುರಿಸುತ್ತಿರುವ ಸವಾಲುಗಳು ಮತ್ತು ತಂತ್ರಜ್ಞಾನದ ಪರಿಣಾಮಕಾರಿ ಬಳಕೆ ಬಗ್ಗೆ ಎಸ್‌ಸಿಡಿಸಿಸಿ ಬ್ಯಾಂಕ್‌ನ ಸಭಾಂಗಣದಲ್ಲಿ ಸೋಮವಾರ ನಡೆದ ರಾಜ್ಯ ಮಟ್ಟದ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ನೋಟು ಅಪಮೌಲ್ಯದಿಂದ ಈಗಾಗಲೇ ರೈತರು, ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಇದರಿಂದ ಸಕಾಲದಲ್ಲಿ ಸಾಲ ಮರುಪಾವತಿ ಮಾಡಲು ಅಸಾಧ್ಯವಾದ ಸ್ಥಿತಿಯಲ್ಲಿದ್ದಾರೆ. ಸಹಕಾರಿ ಸಂಘಗಳು ಸೋಲಲು ಬಿಡಬಾರದು. ಸಹಕಾರಿ ಸಂಘಗಳು ಇನ್ನಷ್ಟು ಬಲಿಷ್ಠವಾಗೊಳಿಸುವಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ರಾಜೇಂದ್ರ ಕುಮಾರ್ ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸನ್ಮತಿ ಪ್ರತಿಷ್ಠಾನದ ಮಹಾಬಲ ಗಿರಿ ಮಾತನಾಡಿ, ಸಹಕಾರಿ ಸಂಸ್ಥೆಗಳು ಡಿಜಿಟಲ್ ತಂತ್ರಜ್ಞಾನಕ್ಕೆ ಒಗ್ಗದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಇಲ್ಲದಿದ್ದರೆ ಸಂಘಗಳ ಸದಸ್ಯರು ಈ ಕ್ಷೇತ್ರ ಬಿಟ್ಟು ಒಳ್ಳೆಯ ಸೇವೆ ಸಿಗುವಲ್ಲಿಗೆ ಹೋಗುವುದರಲ್ಲಿ ಸಂಶಯ ಇಲ್ಲ. ಅಲ್ಲದೆ ಇದರಿಂದ ಸಹಕಾರ ಸಂಘಗಳು ಮುಚ್ಚುವ ಭೀತಿ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರಲ್ಲದೆ, ದೇಶದಲ್ಲಿ ಸಂಪೂರ್ಣವಾಗಿ ಕ್ಯಾಶ್‌ಲೆಸ್ ಸಾಧ್ಯವಿಲ್ಲ ಆದರೆ ಲೆಸ್ ಕ್ಯಾಶ್ ಸಾಧ್ಯವಾಗಬಹುದು ಎಂದು ಅಭಿಪ್ರಾಯಪಟ್ಟರು.
ದೇಶದ ಬ್ಯಾಂಕ್‌ಗಳಿಗೆ 15 ಲಕ್ಷ ಕೋ.ರೂ. ಹಣ ಹರಿದು ಬಂದ ಕಾರಣ ಬ್ಯಾಂಕ್‌ಗಳ ಆರ್ಥಿಕ ಧಾರಣಾ ಶಕ್ತಿ ಜಾಸ್ತಿಯಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಬ್ಯಾಂಕ್‌ಗಳ ಠೇವಣಿ ಮೇಲಿನ ಹಾಗೂ ಸಾಲದ ಮೇಲಿನ ಬಡ್ಡಿ ದರಗಳಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಇದರ ಪರಿಣಾಮ ಸಹಕಾರಿ ಸಂಘಗಳ ಮೇಲೂ ಆಗಲಿದೆ ಎಂದು ಲೆಕ್ಕಪರಿಶೋಧಕ ಬಿ.ವಿ.ರವೀಂದ್ರನಾಥ್ ಹೇಳಿದರು.
ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಟಿ.ರಾಜಾರಾಂ ಭಟ್, ಸದಾಶಿವ ಉಳ್ಳಾಲ್, ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ.ಸಲೀಂ, ಸುಂದರ ಗೌಡ ಇಚ್ಚಿಲ, ಸಲಹೆಗಾರ ಹಿಮವಂತ ಗೋಪಾಲ್, ಕರ್ನಾಟಕ ರಾಜ್ಯ ಮಹಾಮಂಡಲ ಮೈಸೂರು ವಿಭಾಗದ ಸಮನ್ವಯಾಧಿಕಾರಿ ಬಿ.ಸಿ.ಶಿವಾನಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಹಕಾರ ಇಲಾಖೆಯಲ್ಲಿ 39 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಹಿರಿಯ ದೇವಾಡಿಗರನ್ನು ಸನ್ಮಾನಿಸಲಾಯಿತು.
ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್ಯ ಸ್ವಾಗತಿಸಿದರು. ಲಕ್ಷಣ್ ಕುಮಾರ್ ಮಲ್ಲೂರು ಕಾರ್ಯಕ್ರಮ ನಿರೂಪಿಸಿದರು.







