ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಸರ್ವರ್ ಸಮಸ್ಯೆ ಶೀಘ್ರದಲ್ಲೇ ಪರಿಹಾರ: ಜಿಲ್ಲಾಧಿಕಾರಿ

ಮಂಗಳೂರು, ಜ. 16: ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ಯಂತ್ರಗಳ ಮೂಲಕ ಕೂಪನ್ ಪಡೆದು ಅಲ್ಲೇ ಪಡಿತರ ಪಡೆಯುವ ವ್ಯವಸ್ಥೆ ಜಾರಿಯಲ್ಲಿದ್ದರೂ ಸರ್ವರ್ ಸಮಸ್ಯೆ ಎದುಗಾತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸರಕಾರದ ಗಮನಕ್ಕೆ ತರುವುದಾಗಿ ದ.ಕ.ಜಿಲ್ಲಾಧಿಕಾರಿ ಡಾ. ಕೆ.ಜಿ.ಜಗದೀಶ್ ಹೇಳಿದ್ದಾರೆ.
ಅವರು ಸೋಮವಾರ ನಗರದ ಪುರಭವನದಲ್ಲಿ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ನ್ಯಾಯಬೆಲೆ ಅಂಗಡಿಗಳ ಪ್ರಮುಖರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡುತ್ತಿದ್ದರು.
ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಪದೇ ಪದೇ ಸರ್ವರ್ ಸಮಸ್ಯೆ ಎದುರಾಗುತ್ತಿದ್ದು, ಉತ್ತಮ ಸರ್ವರ್‌ನ್ನು ಅಳವಡಿಸುವಂತೆ ಪಡಿತರ ವಿತರಕರು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಇದೊಂದು ಉತ್ತಮ ಸಲಹೆಯಾಗಿದ್ದು, ಉತ್ತಮ ಸರ್ವರ್ ಅಳವಡಿಕೆಯಿಂದ ಯಾವುದೇ ತೊಡಕುಗಳಿಲ್ಲದೆ ಗ್ರಾಹಕರೊಂದಿಗಿನ ವ್ಯವಹಾರವನ್ನು ತ್ವರಿತಗತಿಯಲ್ಲಿ ಮಾಡಲು ಸಾಧ್ಯ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಪಡಿತರ ವಿತರಣಾ ವ್ಯವಸ್ಥೆಯಲ್ಲಿನ ಅವ್ಯವಹಾರವನ್ನು ತಪ್ಪಿಸಲು ಸರಕಾರ ಕೂಪನ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಆರಂಭದಲ್ಲಿ ಕೂಪನನ್ನು ಗ್ರಾ.ಪಂ.ಕಚೇರಿಗಳಲ್ಲಿ ನೀಡಿ ಪಡಿತರವನ್ನು ಪಡೆಯುವ ವ್ಯವಸ್ಥೆ ಆರಂಭಿಸಲಾಯಿತು. ಬಳಿಕ ಅಲೆದಾಟ ತಪ್ಪಿಸಲು ಮೊಬೈಲ್ ಮೂಲಕ ಕೂಪನ್ ಜನರೇಟ್ ಮಾಡುವ ವ್ಯವಸ್ಥೆ ಬಂತು.ಮೊಬೈಲ್ ಬಳಕೆ ಎಲ್ಲರಿಗೂ ಸಾಧ್ಯವಾಗದ ಕಾರಣ ಪ್ರಸ್ತುತ ನ್ಯಾಯಬೆಲೆ ಅಂಗಡಿಗಳಲ್ಲೇ ಬಯೋಮೆಟ್ರಿಕ್ ಯಂತ್ರಗಳ ಮೂಲಕ ಕೂಪನ್ ಪಡೆದು ಅಲ್ಲೇ ಪಡಿತರ ಪಡೆಯುವ ವ್ಯವಸ್ಥೆ ಜಾರಿಗೆ ಬಂದಿದೆ. ಆದರೆ ಈ ವ್ಯವಸ್ಥೆಯಲ್ಲಿ ಸರ್ವರ್ ಸಮಸ್ಯೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತಮ ದರ್ಜೆಯ ಸರ್ವರ್ ವಿತರಿಸುವ ಕುರಿತು ಈಗಾಗಲೇ ತಂತ್ರಜ್ಞರ ಜತೆಗೆ ಚರ್ಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಸಭೆಯಲ್ಲಿ ಪಡಿತರ ವಿತರಿಸುವ ಸಹಕಾರ ಸಂಘಗಳ ಪರವಾಗಿ ಮಾತನಾಡಿದ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್, ಪಡಿತರ ವಿತರಣೆಯ ಕೂಪನ್‌ಗಳನ್ನು ಗ್ರಾ.ಪಂ.ಗಳಲ್ಲೇ ನೀಡಬೇಕು. ಪಡಿತರ ಹಾಗೂ ಸೀಮೆಎಣ್ಣೆ ಒಂದೇ ಸಮಯದಲ್ಲಿ ವಿತರಣೆಯಾಗಬೇಕು. ಜತೆಗೆ ಎಸ್‌ಎಂಎಸ್ ವ್ಯವಸ್ಥೆ ಬೇಡ ಎಂಬ ಮೊದಲಾದ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ದ.ಕ. ಜಿಲ್ಲೆಯಲ್ಲಿ 87 ಸಾವಿರ ಕುಟುಂಬಗಳು ಸೀಮೆಎಣ್ಣೆ ಪಡೆಯುತ್ತಿವೆ. ಇಂತಹ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ನೀಡುವ ಕುರಿತು ಗ್ಯಾಸ್ ವಿತರಣಾ ಕಂಪೆನಿಗಳೊಂದಿಗೆ ಚರ್ಚಿಸಲಾಗುವುದು. ಜತೆಗೆ ಸೀಮೆಎಣ್ಣೆ ಪೂರೈಕೆ ನಿಂತ ಬಳಿಕ ಬಿಳಿ ಸೀಮೆಎಣ್ಣೆ ವಿತರಿಸಲು ಪರವಾನಿಗೆ ನೀಡುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದರು.
ಆಧಾರ್‌ಲಿಂಕ್ ಇದ್ದರೂ ಪಡಿತರ ಸಿಗುವುದಿಲ್ಲ. ಪಡಿತರ ಬರುವಾಗ ವಿಳಂಬವಾಗುತ್ತಿದೆ ಎಂದು ಕೆಲವು ನ್ಯಾಯಬೆಲೆ ಅಂಗಡಿಯವರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು ಈ ಕುರಿತು ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರಲ್ಲದೆ, ಪಡಿತರವನ್ನು ಪ್ಯಾಕೆಟ್ ಮೂಲಕ ನೀಡುವ ಸಲಹೆಯನ್ನೂ ಸರಕಾರದ ಗಮನಕ್ಕೆ ತರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಆಹಾರ ಇಲಾಖೆಯ ಸಹಾಯಕ ನಿರ್ದೇಶಕ ಎ.ಟಿ.ಜಯಪ್ಪ ಉಪಸ್ಥಿತರಿದ್ದರು.







