ನಾಯಕರ ಕಚ್ಚಾಟದಿಂದ ಪಕ್ಷಕ್ಕೆ ಮುಜುಗರ: ಸದಾನಂದ ಗೌಡ

ಬೆಂಗಳೂರು, ಜ.16: ಬಿಜೆಪಿಯ ಇಬ್ಬರು ಹಿರಿಯ ನಾಯಕರ ವರ್ತನೆಯಿಂದ ಕಾರ್ಯಕರ್ತರಿಗೆ ಹಾಗೂ ಪಕ್ಷಕ್ಕೆ ಮುಜುಗರ ಉಂಟಾಗಿದೆ ಎಂದು ಪರೋಕ್ಷವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಮೇಲ್ಮನ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ವಿರುದ್ಧ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳ ಕುರಿತು ಆರೆಸೆಸ್ಸ್ ಕಚೇರಿಯಲ್ಲಿ ಪ್ರಮುಖರ ಸಮ್ಮುಖದಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದರು.
ಇದೇ ರೀತಿಯ ಧೋರಣೆಗಳಿಂದ ಈ ಹಿಂದೆ ಪಕ್ಷದ ಮೇಲೆ ಆಗಿರುವ ಪರಿಣಾಮಗಳನ್ನು ಮರೆತು, ವರ್ತಿಸುವುದು ಸರಿಯಲ್ಲ. ಪಕ್ಷದ ಹೈಕಮಾಂಡ್ ಪಂಚ ರಾಜ್ಯಗಳ ಚುನಾವಣೆಯಿಂದ ಈ ಬಗ್ಗೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಚುನಾವಣೆಯ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಈ ವಿಷಯದ ಕುರಿತು ಗಮನ ಹರಿಸುತ್ತಾರೆ ಎಂದು ಸದಾನಂದಗೌಡ ಹೇಳಿದರು.
ಬಿಜೆಪಿ ಹೈಕಮಾಂಡ್ ಈ ಸಮಸ್ಯೆಯನ್ನು ಒಂದೇ ದಿನದಲ್ಲಿ ಬಗೆಹರಿಸಲಿದೆ ಎಂಬ ವಿಶ್ವಾಸವಿದೆ. ಕೇಂದ್ರದ ಸಚಿವನಾಗಿ ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ ಎಂದು ಅವರು ಹೇಳಿದರು.







