‘ಎಂಐಎನ್‌ಎಫ್ ಫೆಡರೇಷನ್ ಕಪ್-2017’ : ಕರ್ನಾಟಕಕ್ಕೆ ಸಮಗ್ರ ಪ್ರಶಸ್ತಿ

ಮಂಗಳೂರು, ಜ. 16: ರಾಜಸ್ಥಾನದ ಜೈಪುರದಲ್ಲಿ ಜ.10ರಿಂದ 14ರವರೆಗೆ ನಡೆದ ಎಂಐಎನ್‌ಎಫ್ ಫೆಡರೇಷನ್ ಕಪ್-2017’ ರಾಷ್ಟ್ರಮಟ್ಟದ ಮ್ಯುಥಾಯ್ ಕಿಕ್ ಬಾಕ್ಸಿಂಗ್ ಟೂರ್ನಿಯಲ್ಲಿ ಕರ್ನಾಟಕ ರಾಜ್ಯ ತಂಡ ಪ್ರತಿನಿಧಿಸಿ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ಸೋಮವಾರ ಕಂಕನಾಡಿ ರೈಲ್ವೇ ಜಂಕ್ಷನ್‌ನಲ್ಲಿ ಬಂದಿಳಿದ ಈ ತಂಡದ ಮಂಗಳೂರಿನ ಕಿಕ್ ಬಾಕ್ಸಿಂಗ್ ಪಟುಗಳನ್ನು ರಾಜ್ಯ ಮ್ಯುಥಾಯ್ ಅಸೋಸಿಯೇಶನ್ ಹಾಗೂ ಬಿಜೆಪಿ ಘಟಕದ ವತಿಯಿಂದ ಸ್ವಾಗತಿಸಲಾಯಿತು.
ಕರ್ನಾಟಕ ಮ್ಯುಥಾಯ್ ತಂಡದಲ್ಲಿ 18 ಫೈಟರ್‌ಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಎಲ್ಲರೂ ಪದಕಗಳನ್ನು ಪಡೆದಿದ್ದಾರೆ. 6 ಚಿನ್ನ, 8 ಬೆಳ್ಳಿ ಹಾಗೂ 4 ತಾಮ್ರದ ಪದಕಗಳನ್ನು ಗಳಿಸಿದ್ದಾರೆ. ತಂಡದಲ್ಲಿದ್ದವರಲ್ಲಿ ಮಂಗಳೂರಿನ ಕಿಕ್ ಬಾಕ್ಸರ್‌ಗಳು 4 ಚಿನ್ನ, 6 ಬೆಳ್ಳಿ ಹಾಗೂ 4 ತಾಮ್ರ ಹಾಗೂ ಬೆಂಗಳೂರಿನ 4 ಕಿಕ್‌ಬಾಕ್ಸರ್‌ಗಳು 2 ಚಿನ್ನ ಹಾಗೂ 2 ಬೆಳ್ಳಿಯನ್ನು ಪಡೆದುಕೊಂಡಿದ್ದಾರೆ.
ಕರ್ನಾಟಕ ತಂಡದ ಕೋಚ್ ಹಾಗೂ ಕರ್ನಾಟಕ ಮ್ಯುಥಾಯ್ ಅಸೋಸಿಯೇಶನ್‌ನ ಮುಖ್ಯ ಪ್ರಧಾನ ಕಾರ್ಯದರ್ಶಿ ನಿತೇಶ್ ಚಂದ್ರ ಕುಮಾರ್ ತಂಡದ ಸದಸ್ಯರನ್ನು ತರಬೇತುಗೊಳಿಸಿದ್ದರು.
ಅಕ್ಷತಾ (43-48 ಕೆ.ಜಿ.), ದಿವ್ಯಶ್ರೀ (51-54 ಕೆ.ಜಿ.), ಅನಿಶಾ ಆರ್. ಶೆಟ್ಟಿ (57-60 ಕೆ.ಜಿ.), ಶೋಧನ್ ಶೆಟ್ಟಿ (54 ಕೆ.ಜಿ), ಉವಾಝ್ ಜಲಿಹಲ್ (71-75 ಕೆ.ಜಿ), ಹಿಮಾನ್ಶು ಎಂ. ಹೆಗ್ಡೆ (81-86 ಕೆ.ಜಿ.)ಯಲ್ಲಿ ಚಿನ್ನದ ಪದಕ ಗಳಿಸಿದ್ದರೆ, ಆಯಿಶಾ (48-51 ಕೆ.ಜಿ), ಅನ್ವಿತಾ ಆಳ್ವ (54-75 ಕೆ.ಜಿ.), ಅರ್ಜುನ್ ಸುಜೀರ್ ವಿನೋದ್ (48-51 ಕೆ.ಜಿ.), ಮುಹಮ್ಮದ್ ಶಬೀಬ್ (51-54 ಕೆ.ಜಿ.), ಸುಹಾಸ್ (57-60 ಕೆ.ಜಿ.), ರಿಷಿಕೇಶ್ (76-81 ಕೆ.ಜಿ.), ರ್ಝೀನ್ (86-91 ಕೆ.ಜಿ.), ಅಕ್ಷಯ್ ಶೆಟ್ಟಿ (91+ಕೆ.ಜಿ.) ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ. ಮುಹಮ್ಮದ್ ಇಸಾ ಬಿನ್ ಅಯ್ಯೂಬ್ (44-48 ಕೆ.ಜಿ.), ಸಲೀಂ ರಝಾ ಖಾನ್ (60-64 ಕೆ.ಜಿ.), ಅಂಕುಶ್ ಭಂಡಾರಿ (64-67 ಕೆ.ಜಿ.), ಕಾರ್ತಿಕ್ (67-71 ಕೆ.ಜಿ.) ತಾಮ್ರದ ಪದಕ ಬಾಚಿಕೊಂಡಿದ್ದಾರೆ.
ಪ್ರಥಮ ಬಾರಿಗೆ ಸಮಗ್ರ ಪ್ರಶಸ್ತಿ
ತಂಡದ ಸ್ವಾಗತದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕರ್ನಾಟಕ ಮ್ಯುಥಾಯ್ ಅಸೋಸಿಯೇಶನ್‌ನ ಅಧ್ಯಕ್ಷ ರಾಜ್ ಗೋಪಾಲ್ ರೈ ಅವರು, ರಾಜಸ್ಥಾನದಲ್ಲಿ ಜರಗಿದ ರಾಷ್ಟ್ರಮಟ್ಟದ ಮ್ಯುಥಾಯ್ ಕಿಕ್ ಬಾಕ್ಸಿಂಗ್ ಟೂರ್ನಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ 18 ಮಂದಿ ಕಿಕ್ ಬಾಕ್ಸರ್‌ಗಳು ಕೂಡಾ ಪದಕಗಳನ್ನು ಪಡೆಯುವ ಮೂಲಕ ದಕ್ಷಿಣ ಭಾರತದಲ್ಲಿ, ರಾಜ್ಯದಲ್ಲಿ ಪ್ರಥಮ ಬಾರಿಗೆ ಈ ಸಮಗ್ರ ಪ್ರಶಸ್ತಿ ದೊರೆತಿದೆ ಎಂದರು.
18 ಮಂದಿ ಕಿಕ್ ಬಾಕ್ಸರ್‌ಗಳು ಉತ್ತಮ ಸಾಧನೆ ಮಾಡಿದ್ದಾರೆ. ಹಲವು ರಾಜ್ಯಗಳ ಸ್ಪರ್ಧಾಳುಗಳು ಈ ಟೂರ್ನಿಯಲ್ಲಿ ಭಾಗವಹಿಸಿದ್ದರು. ರಾಜ್ಯದ ತಂಡ ಸಮಗ್ರ ಪ್ರಶಸ್ತಿಯನ್ನು ಪಡೆದಿದೆ. ರಾಷ್ಟ್ರೀಯ ಕೋಚ್ ಬಾಲಕೃಷ್ಣ ಶೆಟ್ಟಿ ಅವರು ಕೂಡ ತಂಡಕ್ಕೆ ಹೆಚ್ಚಿನ ತರಬೇತಿ ನೀಡಿದ್ದರು ಎಂದರು.
ತಂಡದ ಕೋಚ್ ನಿತೇಶ್ ಅವರು ಮಾತನಾಡಿ, ಕರ್ನಾಟಕ ತಂಡ ಈ ಟೂರ್ನಿಯಲ್ಲಿ 18 ಪದಕಗಳನ್ನು ಗಳಿಸಿದೆ. ಆದರೆ, 10 ಚಿನ್ನದ ಪದಕಗಳನ್ನು ಗಳಿಸುವ ಯೋಜನೆ ಹೊಂದಿದ್ದೆವು. ಮಂಗಳೂರಿನ ವಾತಾವರಣ ಹಾಗೂ ಜೈಪುರದ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಗಳಿತ್ತು. ಆದರೂ, ತಂಡವು ಉ್ತಮ ನಿರ್ವಹಣೆ ತೋರಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ದಕ್ಷಿಣ ಅಧ್ಯಕ್ಷ ವೇದವ್ಯಾಸ ಕಾಮತ್, ಜಿಲ್ಲಾ ಕೋಶಾಧಿಕಾರಿ ಸಂಜಯ್ ಪ್ರಭು, ಮ್ಯುಥಾಯ್ ಅಸೋಸಿಯೇಶನ್‌ನ ಉಪಾಧ್ಯಕ್ಷ ಮಹೇಶ್ ಡಿ. ಪಾಂಡ್ಯ, ಕಾನೂನು ಸಲಹೆಗಾರ ರಾಘವೇಂದ್ರ ರಾವ್, ಸಲಹೆಗಾರ ಬಿ.ಎನ್. ಆಚಾರ್ಯ, ದೇವಿಚರಣ್ ಶೆಟ್ಟಿ, ಅಂತಾರಾಷ್ಟ್ರೀಯ ಮಟ್ಟದ ಮಾಜಿ ಕಬಡ್ಡಿ ಆಟಗಾರ ಶೇಖರ್ ರೈ, ಸುರೇಂದ್ರ ಶೇಖ, ಶಿವರಾಮ ಶೆಟ್ಟಿ ಬಾಯಾರ್, ಅಸೋಸಿಯೇಶನ್‌ನ ಜಂಟಿ ಕಾರ್ಯದರ್ಶಿ ಸಚಿನ್ ರಾಜ್ ರೈ, ಕೋಶಾಧಿಕಾರಿ ಮನೀಷ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.







