ಆ್ಯಂಟಿಬಯಾಟಿಕ್‌ಗೂ ಬಗ್ಗದ ಸೂಪರ್‌ಬಗ್ ಸೋಂಕಿನಿಂದ ಮಹಿಳೆ ಸಾವು : ಭಾರತದಲ್ಲಿ ಈಕೆಗೆ ಸೋಂಕು ತಗಲಿರುವ ಶಂಕೆ

ವಾಷಿಂಗ್ಟನ್, ಜ.16: ಸೂಪರ್‌ಬಗ್ ಸೋಂಕಿನಿಂದ ಅಮೆರಿಕಾದಲ್ಲಿ ಮಹಿಳೆಯೋರ್ವರು ಮೃತಪಟ್ಟಿದ್ದು , ಈಕೆ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭ ಈಕೆಗೆ ಈ ಸೋಂಕು ತಗಲಿದೆ ಎಂದು ಶಂಕಿಸಲಾಗಿದೆ. ಸಧ್ಯ ಲಭ್ಯವಿರುವ ಯಾವುದೇ ಆ್ಯಂಟಿಬಯಾಟಿಕ್‌ಗಳನ್ನೂ ತಾಳಿಕೊಳ್ಳುವ ಸಾಮರ್ಥ್ಯವನ್ನು ಈ ಬ್ಯಾಕ್ಟೀರಿಯಾ ಹೊಂದಿದೆ.
ಕಳೆದ ವರ್ಷ ಭಾರತಕ್ಕೆ ಭೇಟಿ ನೀಡಿದ್ದ ಬಳಿಕ 70ರ ಹರೆಯದ ಈ ಮಹಿಳೆ ಸೋಂಕು ರೋಗಕ್ಕೆ ತುತ್ತಾಗಿದ್ದು ಅವರನ್ನು ವಿಶೇಷ ಚಿಕಿತ್ಸಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಕೆಗೆ ತಗಲಿದ್ದ ಸೋಂಕುರೋಗ ಅತ್ಯಂತ ತೀವ್ರವಾಗಿದ್ದು ಆಸ್ಪತ್ರೆಯ 14 ಆ್ಯಂಟಿಬಯಾಟಿಕ್ ವೈದ್ಯರು ಮಾಡಿದ ಯತ್ನಗಳೂ ಸಫಲವಾಗಲಿಲ್ಲ. ನ್ಯೂಡೆಲ್ಲಿ ಮೆಟಲೊ-ಬೀಟಾ-ಲ್ಯಾಕ್ಟಮೇಸ್ (ಎನ್‌ಡಿಎಂ-1) ಎಂದು ಕರೆಯಲ್ಪಡುವ ಕಿಣ್ವದ ಅಂಶ ಈಕೆಯ ದೇಹದಲ್ಲಿ ಪತ್ತೆಯಾಗಿದೆ . ಇದು 26 ವಿಧದ ಆ್ಯಂಟಿಬಯಾಟಿಕ್ ಔಷಧಿಗಳೂ ಜಗ್ಗದ ನಿರೋಧಕ ಶಕ್ತಿ ಹೊಂದಿರುವುದು ಅಮೆರಿಕಾದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ ಕೇಂದ್ರದಲ್ಲಿ ನಡೆಸಲಾದ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಕಾರ್ಬಪೆನೆಮ್ -ರೆಸಿಸ್ಟೆಂಟ್ ಎಂಟರೊಬ್ಯಾಕ್ಟೀರಿಯಾಸಿಸ್(ಸಿಆರ್‌ಇ) ಎಂದು ಕರೆಯಲ್ಪಡುವ, ಬಹು ಔಷಧಿ ನಿರೋಧಕ ಶಕ್ತಿ ಹೊಂದಿರುವ ಸೂಕ್ಷ್ಮಜೀವಿಯಿಂದ ಈ ಸೋಂಕು ಹರಡುತ್ತಿದ್ದು ಇದರಿಂದ ಮರಣಹೊಂದುವ ಪ್ರಮಾಣ ಅತ್ಯಧಿಕವಾಗಿರುತ್ತದೆ.
ಅಮೆರಿಕಾಕ್ಕೆ ಈ ರೋಗ ಹೊಸದೇನಲ್ಲ. ಆದರೆ ಈ ಸೋಂಕಿಗೆ ಕಾರಣವಾಗುವ ಬ್ಯಾಕ್ಟೀರಿಯಾದ ನಿಯಂತ್ರಣ ಯಾವುದೇ ಔಷಧಿಯಿಂದ ಸಾಧ್ಯವಾಗುತ್ತಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ. ಮಹಿಳೆಯ ದೇಹಾರೋಗ್ಯ ಸ್ಥಿತಿ ದಿನೇ ದಿನೇ ಕ್ಷೀಣಿಸಿದ್ದು ದೇಹದಲ್ಲಿ ನಂಜಿನ ಪ್ರಮಾಣ ಹೆಚ್ಚಾದ ಆಘಾತದಿಂದ ಎರಡು ತಿಂಗಳ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಭಾರತದಲ್ಲಿ ಎರಡು ವರ್ಷ ಇದ್ದ ಈ ಮಹಿಳೆ ಬಲ ತೊಡೆಯ ಮೂಳೆ ಮತ್ತು ಸೊಂಟದ ಮೂಳೆ ಮುರಿತದ ಕಾರಣ ಭಾರತದಲ್ಲಿ ನಾಲ್ಕು ಬಾರಿ ಆಸ್ಪತ್ರೆಗೆ ದಾಖಲಾಗಿದ್ದಳು.
ಈ ಮಹಿಳೆಗೆ ಭಾರತದಲ್ಲೇ ಈ ಸೋಂಕು ತಗಲಿರುವ ಸಾಧ್ಯತೆಯಿದೆ ಎಂದು ವಾಶ್‌ವೊ ಕೌಂಟಿ ಹೆಲ್ತ್ ಡಿಸ್ಟ್ರಿಕ್ಟ್‌ನ ಹಿರಿಯ ಸೋಂಕುರೋಗ ತಜ್ಞ ಲೀ ಚೆನ್ ಅಭಿಪ್ರಾಯಪಟ್ಟಿದ್ದಾರೆ.







