ಸಿಯಾಟಲ್‌ನಲ್ಲಿ ದುಷ್ಕರ್ಮಿಯಿಂದ ಮಸೀದಿಗೆ ಬೆಂಕಿ : ಓರ್ವನ ಬಂಧನ

ಸ್ಯಾನ್‌ಫ್ರಾನ್ಸಿಸ್ಕೊ,ಜ.15: ಅಮೆರಿಕದ ಸಿಯಾಟಲ್‌ನ ಬೆಲ್ಲೆವ್ಯೆ ಪಟ್ಟಣಲ್ಲಿ 1970ರ ದಶಕದ ಮಸೀದಿಗೆ ಬೆಂಕಿ ಹಚ್ಚಿದ ಘಟನೆ ಸೋಮವಾರ ವರದಿಯಾಗಿದೆ. ಘಟನೆಗೆ ಸಂಬಂಧಿಸಿ 37 ವರ್ಷದ ವ್ಯಕ್ತಿಯೊಬ್ಬನನನ್ನು ಬಂಧಿಸಲಾಗಿದೆ. ಆತ ಈ ಮೊದಲು ಮಸೀದಿಗೆ ಪ್ರಾರ್ಥಿಸಲು ಬರುವವರೊಂದಿಗೆ ಧರ್ಮನಿಂದನೆಯ ಮಾತುಗಳನ್ನಾಡಿದ್ದನೆಂದು ಪೊಲೀಸರು ಹೇಳಿದ್ದಾರೆ.
ಆದರೆ ಇದು ದ್ವೇಷ ಅಪರಾಧವೆಂಬುದಕ್ಕೆ ಯಾವುದೇ ಸಾಕ್ಷಾಧಾರಗಳು ದೊರೆತಿಲ್ಲವೆಂದು ಸ್ಥಳೀಯ ಪೊಲೀಸ್ ವರಿಷ್ಠ ಸ್ಟೀವ್ ಮೈಲೆಟ್ ಹೇಳಿರುವುದಾಗಿ ‘ಸಿಯಾಟಲ್ ಟೈಮ್ಸ್’ ವರದಿ ಮಾಡಿದೆ.
ಮರದಿಂದ ನಿರ್ಮಿತವಾಗಿರುವ ‘ಇಸ್ಲಾಮಿಕ್ ಸೆಂಟರ್ ಆಫ್‌ಈಸ್ಟ್‌ಸೈಡ್ ಮಸೀದಿ’ ಯಲ್ಲಿ ಬೆಂಕಿಯ ಜ್ವಾಲೆಗಳು ಭುಗಿಲೇಳುತ್ತಿರುವುದನ್ನು ಕಂಡ ಪ್ರತ್ಯಕ್ಷ ದರ್ಶಿ ಯೊಬ್ಬ ಮಾಹಿತಿ ನೀಡಿದ ಕೂಡಲೇ ಬೆಲ್ಲೆವ್ಯೆ ಪೊಲೀಸ್ ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಮಸೀದಿಯ ಉತ್ತರಭಾಗ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಘಟನೆ ನಡೆದ ವೇಳೆ ಯಾರೂ ಮಸೀದಿಯೊಳಗಿರಲಿಲ್ಲವೆಂದು ವರದಿ ತಿಳಿಸಿದೆ.
ಮಸೀದಿಯಲ್ಲಿ ವಾಹನ ಪಾರ್ಕಿಂಗ್ ಸ್ಥಳದ ಸಮೀಪವೇ ನಿರ್ಗತಿಕನೊಬ್ಬ ಮಲಗಿದ್ದನ್ನು ಕಂಡ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಆತ ಪಾನಮತ್ತನಂತೆ ಕಂಡುಬಂದಿಲ್ಲವೆಂದು ಅವರು ಹೇಳಿದ್ದಾರೆ. ಕಳೆದ ವರ್ಷ ಆರೋಪಿಯು, ಒಂದು ಸಂದರ್ಭದಲ್ಲಿ ಮಸೀದಿಗೆ ಬಂದು ತನಗೆ ಪ್ರಾರ್ಥಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದ. ಆದರೆ ಆತ ಧರ್ಮನಿಂದನೆಯ ಮಾತುಗಳನ್ನಾಡಿದ್ದರಿಂದ ಮಸೀದಿಗೆ ಆತನ ಪ್ರವೇಶವನ್ನು ನಿರ್ಬಂಧಿಸಲಾಗಿತ್ತೆಂದು ಇಮಾಂ ಫೈಝಲ್ ಹಸನ್ ತಿಳಿಸಿದ್ದಾರೆ.ಮಸೀದಿಯಲ್ಲಿದ್ದ ಹಲವಾರು ಧಾರ್ಮಿಕ ಗ್ರಂಥಗಳನ್ನು ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಿಸಿದ್ದಾರೆ.
ಬೆಲ್ಲೆವ್ಯೆ ಪಟ್ಟಣದಲ್ಲಿರುವ ಏಕೈಕ ಮಸೀದಿ ಇದಾಗಿದ್ದು, ಪ್ರತಿದಿನ ಸರಾಸರಿ 100 ಜನರು ಇಲ್ಲಿಗೆ ಪ್ರಾರ್ಥನೆ ಆಗಮಿಸುತ್ತಾರೆ. ಶುಕ್ರವಾರದ ನಮಾಝ್‌ನಲ್ಲಿ ಸುಮಾರು 1 ಸಾವಿರ ಮಂದಿ ಭಾಗವಹಿಸುತ್ತಾರೆ. ಈ ಮಧ್ಯೆ ಬೆಲ್ಲೆವ್ಯೆ ಮೇಯರ್ ಘಟನೆಯನ್ನು ಖಂಡಿಸಿದ್ದು, ಮುಸ್ಲಿಂ ಸಹೋದರರು ಹಾಗೂ ಸಹೋದರರ ಜೊತೆ ದೃಢವಾಗಿ ನಿಲ್ಲುವೆವು ಎಂದು ಘೋಷಿಸಿದ್ದಾರೆ.







