ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ : 5.5 ಲಕ್ಷ ರೂ. ಮೌಲ್ಯದ ಕೋಕೆನ್‌ನೊಂದಿಗೆ ಘಾನಾ ಪ್ರಜೆ ಸೆರೆ

ಮಂಗಳೂರು, ಜ. 16: ನಗರದಲ್ಲಿ ಮಾದಕ ವಸ್ತು ಕೊಕೇನ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಘಾನಾ ದೇಶದ ಪ್ರಜೆಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿ, ಆತನ ಬಳಿಯಿದ್ದ ರೂ.5.50 ಲಕ್ಷ ಮೌಲ್ಯದ ಕೊಕೇನ್ ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಚಿಗೋಯಿ ಫ್ರಾನ್ಸಿಸ್ ಕ್ರಿಸ್ಟೋರ್ (37) ಎಂದು ಗುರುತಿಸಲಾಗಿದೆ.
ಈತ ಗೋವಾದ ಮೂಲಕ ಮಂಗಳೂರಿಗೆ ಬಂದಿದ್ದು, ಕೊಕೇನ್ ಮಾರಾಟಕ್ಕೆ ಗ್ರಾಹಕರಿಗಾಗಿ ಹುಡುಕಾಡುತ್ತಿದ್ದ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ನಗರದ ಮಲ್ಲಿಕಟ್ಟೆ ಲೋಬೋ ಲೇನ್ ರಸ್ತೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈತ ಸುಮಾರು 2 ವರ್ಷದ ಹಿಂದೆ ಬಿಸಿನೆಸ್ ವೀಸಾದಲ್ಲಿ ಭಾರತಕ್ಕೆ ಬಂದಿದ್ದ. ನಂತರ ಗಾನಾಕ್ಕೆ ವಾಪಾಸು ಹೋಗದೇ ಅನಧಿಕೃತವಾಗಿ ಇಲ್ಲಿ ವಾಸವಾಗಿದ್ದ.ಆರೋಪಿಯಿಂದ 5.50ಲಕ್ಷ ವೌಲ್ಯದ ಕೊಕೇನ್, 2 ಮೊಬೈಲ್ ಹಾಗೂ 3,300 ರೂ. ಸೇರಿದಂತೆ ಒಟ್ಟು ರೂ. 5,55,300 ಮೌಲ್ಯದ ಸೊತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈಗಾಗಲೇ ಈ ಹಿಂದೆ 2-3 ಬಾರಿ ಈತನು ಮಂಗಳೂರಿಗೆ ಬಂದು ಹಲವಾರು ಮಂದಿಗೆ ಕೊಕೇನ್‌ನ್ನು ಮಾರಾಟ ಮಾಡಿದ್ದ ಎಂದು ಹೇಳಲಾಗಿದ್ದು.ಆರೋಪಿಯನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಅವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಕೆ.ಎಂ. ಶಾಂತರಾಜು ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಡಾ.ಸಂಜೀವ್ ಎಂ. ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.







