‘ಚೇಸಿಂಗ್ ಕಿಂಗ್’ ವಿರಾಟ್ ಕೊಹ್ಲಿ

ಹೊಸದಿಲ್ಲಿ, ಜ.16: ವಿರಾಟ್ ಕೊಹ್ಲಿ ತಮ್ಮ ಬ್ಯಾಟ್‌ನಲ್ಲಿ ಪವಾಡ ನಡೆಸುತ್ತಿರುವಂತೆ ಕಂಡುಬರುತ್ತಿದ್ದಾರೆ. ಭಾರತದ ನಾಯಕ ರವಿವಾರ ಇಂಗ್ಲೆಂಡ್ ವಿರುದ್ಧ ಗರಿಷ್ಠ ಮೊತ್ತದ ಮೊದಲ ಏಕದಿನ ಪಂದ್ಯದಲ್ಲಿ ತಂಡದ ಯಶಸ್ವಿ ಚೇಸಿಂಗ್‌ನ ಮಾಸ್ಟರ್‌ಮೈಂಡ್ ಆಗಿ ಹೊರಹೊಮ್ಮಿದ್ದರು. ಈ ಮೂಲಕ ತಾನು ಏಕದಿನ ಕ್ರಿಕೆಟ್‌ನ ‘ಚೇಸಿಂಗ್ ಕಿಂಗ್’ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ರನ್ ಬೆನ್ನಟ್ಟುವಾಗ ತಂಡದ ಬ್ಯಾಟ್ಸ್‌ಮನ್‌ಗೆ ತಂಡದ ಅಗತ್ಯಕ್ಕೆ ತಕ್ಕಂತೆ ಆಡಲು ಸಾಧ್ಯವಾಗುತ್ತದೆ. ನಿರಂತರವಾಗಿ ವಿಕೆಟ್ ಪತನಗೊಂಡರೆ ಇದೊಂದು ಲಿಟ್ಮಸ್ ಟೆಸ್ಟ್ ಕೂಡ ಹೌದು.
ಪುಣೆಯಲ್ಲಿ ರವಿವಾರ ನಡೆದ ಮೊದಲ ಏಕದಿನದಲ್ಲಿ 351 ರನ್ ಗುರಿಪಡೆದಿದ್ದ ಭಾರತ ಒಂದು ಹಂತದಲ್ಲಿ 63 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಕೊಹ್ಲಿ ಸೀಮಿತ ಓವರ್ ನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲಿ ಸೋಲುವ ಭೀತಿ ಎದುರಾಗಿತ್ತು.
ಆಗ ತಂಡಕ್ಕೆ ಆಸರೆಯಾಗಿದ್ದ 28ರ ಪ್ರಾಯದ ಕೊಹ್ಲಿ 122 ರನ್ ಗಳಿಸಿದ್ದಲ್ಲದೆ ಶತಕ ಬಾರಿಸಿದ ಸಹ ಆಟಗಾರ ಕೇದಾರ್ ಜಾಧವ್‌ರೊಂದಿಗೆ ಬರೋಬ್ಬರಿ 200 ರನ್ ಜೊತೆಯಾಟ ನಡೆಸಿ ತಂಡವನ್ನು ದಾಖಲೆ ಗೆಲುವಿನತ್ತ ಮುನ್ನಡೆಸಿದ್ದರು.
ಏಕದಿನ ಕ್ರಿಕೆಟ್‌ನಲ್ಲಿ ರನ್ ಚೇಸಿಂಗ್‌ನ ವೇಳೆ 17ನೆ ಶತಕ ಬಾರಿಸಿದ ಕೊಹ್ಲಿ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಸಾಧನೆಯನ್ನು ಸರಿಗಟ್ಟಿದ್ದರು. ಸಚಿನ್‌ಗಿಂತ 136ಗಿಂತಲೂ ಕಡಿಮೆ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು. ಸಚಿನ್ ಈ ಸಾಧನೆ ಮಾಡಲು 232 ಇನಿಂಗ್ಸ್ ತೆಗೆದುಕೊಂಡಿದ್ದರೆ, ಕೊಹ್ಲಿ ಕೇವಲ 96 ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ.
ಕೊಹ್ಲಿ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಅಗ್ರಮಾನ್ಯ ಬ್ಯಾಟ್ಸ್‌ಮನ್ ಎಂದು ಬಣ್ಣಿಸಿರುವ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾನ್,‘‘ವಿರಾಟ್ ಕೊಹ್ಲಿ ಮತ್ತೊಂದು ಗ್ರಹದಿಂದ ಬಂದಿದ್ದಾರೆ’’ ಎಂದು ಟ್ವೀಟ್ ಮಾಡಿದ್ದಾರೆ.
ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್ ಜಯಿಸಿ ಫೀಲ್ಡಿಂಗ್ ಆಯ್ದುಕೊಂಡಿದ್ದ ಕೊಹ್ಲಿಗೆ ಪಿಚ್‌ನಲ್ಲಿ ಎಷ್ಟು ರನ್ ದಾಖಲಾಗಬಹುದೆಂಬ ಅಂದಾಜಿರಲಿಲ್ಲ. ಈ ಸ್ಟೇಡಿಯಂನಲ್ಲಿ 2ನೆ ಬಾರಿ ಏಕದಿನ ಪಂದ್ಯ ನಡೆದಿತ್ತು.
ತಂಡ ಗೆಲ್ಲಲು ಕಠಿಣ ಸವಾಲು ಪಡೆದಾಗ 27ನೆ ಶತಕ ಬಾರಿಸಿದ ಕೊಹ್ಲಿ ಇನ್ನೂ 11 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಭಾರತ ಮೂರನೆ ಬಾರಿ 350ಕ್ಕೂ ಅಧಿಕ ಗೆಲುವಿನ ಗುರಿಯನ್ನು ಬೆನ್ನಟ್ಟಿತ್ತು. ಪ್ರತಿ ಬಾರಿಯೂ ಕೊಹ್ಲಿ ಶತಕ ಬಾರಿಸಿದ್ದರು.
2008ರಲ್ಲಿ ಕೊಹ್ಲಿ ಕ್ರಿಕೆಟ್‌ಗೆ ಕಾಲಿಟ್ಟ ಬಳಿಕ ಭಾರತ 8 ಬಾರಿ 300 ಅಥವಾ ಅದಕ್ಕಿಂತ ಹೆಚ್ಚು ರನ್‌ನ್ನು ಯಶಸ್ವಿಯಾಗಿ ಚೇಸಿಂಗ್ ಮಾಡಿತ್ತು. ಕೊಹ್ಲಿ ಎರಡು ಬಾರಿ ಮಾತ್ರ ಶತಕಗಳಿಸಿರಲಿಲ್ಲ. ಕೊಹ್ಲಿ 15ನೆ ಬಾರಿ ಯಶಸ್ವಿ ಚೇಸಿಂಗ್‌ನಲ್ಲಿ ತಂಡಕ್ಕೆ ನೆರವಾಗಿದ್ದಾರೆ.
ಏಕದಿನ ಮಾದರಿ ಕ್ರಿಕೆಟ್‌ನಲ್ಲಿ ಕೊಹ್ಲಿ ಮಾತ್ರ ಈ ಸಾಧನೆ ಮಾಡಿದ್ದಾರೆ. ಭಾರತದ ಬ್ಯಾಟಿಂಗ್ ಶಕ್ತಿಯಾಗಿರುವ ಕೊಹ್ಲಿ ಏಕದಿನ ಕ್ರಿಕೆಟ್‌ನ ರನ್ ಚೇಸಿಂಗ್‌ನಲ್ಲಿ 91 ಸರಾಸರಿ ಕಾಯ್ದುಕೊಂಡಿದ್ದಾರೆ. ಆದರೆ, ವಿದೇಶಿ ನೆಲದಲ್ಲಿ ಸ್ವಲ್ಪ ಕಡಿಮೆ ಸರಾಸರಿಯಿದೆ.
ಏಕದಿನ ಕ್ರಿಕೆಟ್‌ನ ರನ್ ಚೇಸಿಂಗ್‌ನಲ್ಲಿ 17ನೆ ಬಾರಿ ಶತಕ ಬಾರಿಸಿರುವ ಕೊಹ್ಲಿ ನಾಲ್ಕು ಶತಕವನ್ನು ಏಷ್ಯಾದಿಂದ ಹೊರಗೆ ಬಾರಿಸಿದ್ದಾರೆ. ಇದರಲ್ಲಿ ಹರಾರೆ ಏಕದಿನವೂ ಸೇರಿದೆ.
ಕೊಹ್ಲಿ ದಕ್ಷಿಣ ಏಷ್ಯಾದಲ್ಲಿ ಮಾತ್ರ ತನ್ನ ಪ್ರಾಬಲ್ಯವನ್ನು ಸೀಮಿತಗೊಳಿಸದೆ ವಿಶ್ವದ ಎಲ್ಲ ಮೈದಾನದಲ್ಲಿ ರನ್ ಚೇಸಿಂಗ್‌ನ ವೇಳೆ ಪ್ರಾಬಲ್ಯ ಮೆರೆಯಲು ಎದುರು ನೋಡುತ್ತಿದ್ದಾರೆ.
ಸಚಿನ್ ಮೈಲುಗಲ್ಲು ಕ್ರಮಿಸಲು ಅಸಾಧ್ಯ: ಕೊಹ್ಲಿ ಅಭಿಮತ
ಹೊಸದಿಲ್ಲಿ, ಜ.16: ಇಂಗ್ಲೆಂಡ್ ವಿರುದ್ಧ ರವಿವಾರ ಮತ್ತೊಂದು ಯಶಸ್ವಿ ಚೇಸಿಂಗ್ ಮಾಡಿರುವ ಭಾರತದ ನಾಯಕ ವಿರಾಟ್ ಕೊಹ್ಲಿ ಅವರು ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ದಾಖಲೆಯೊಂದನ್ನು ಸರಿಗಟ್ಟಿದ್ದರು. ಈಗ ಕೊಹ್ಲಿ ಅವರನ್ನು ತೆಂಡುಲ್ಕರ್‌ಗೆ ಹೋಲಿಸಲಾಗುತ್ತಿದೆ.‘ಮಾಸ್ಟರ್ ಬ್ಲಾಸ್ಟರ್’ ತೆಂಡುಲ್ಕರ್ ಅವರ ಮೈಲುಗಲ್ಲನ್ನು ಕ್ರಮಿಸಲು ಅಸಾಧ್ಯ ಎಂದು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.
‘‘ನಾನು ಅಷ್ಟೊಂದು ವರ್ಷ(24ವರ್ಷ) ಆಡಲು ಸಾಧ್ಯವಿಲ್ಲ. 200 ಟೆಸ್ಟ್, 100 ಅಂತಾರಾಷ್ಟ್ರೀಯ ಶತಕ. ಇವೆಲ್ಲವೂ ನಂಬಲಾಗದ ನಂಬರ್‌ಗಳು. ಇದನ್ನು ಸಾಧಿಸಲು ಅಸಾಧ್ಯವಾದುದು. ಹೌದು, ನಾನು ವ್ಯತ್ಯಾಸ ಉಂಟುಮಾಡಲು ಬಯಸಿರುವೆ. ಕ್ರಿಕೆಟ್‌ನಲ್ಲಿ ಏನಾದರೂ ಸಾಧನೆ ಮಾಡಬೇಕೆಂಬುದು ನನ್ನ ಗುರಿಯಾಗಿದೆ’’ ಎಂದು ಕೊಹ್ಲಿ ಹೇಳಿದರು.
‘‘ಅದೃಷ್ಟವಶಾತ್, ನನಗೆ ಜೀವನದಲ್ಲಿ ಅತ್ಯಂತ ಆತ್ಮೀಯರು ಎಂದು ಹೇಳಿಕೊಳ್ಳುವವರು ಹೆಚ್ಚು ಜನರು ಇಲ್ಲ. ನನ್ನ ಪ್ರಕಾರ ಇದು ನನಗೆ ನೆರವಾಗಿದೆ. ಒಂದು ವೇಳೆ ನಿಮಗೆ ತುಂಬಾ ಸ್ನೇಹಿತರು ಇದ್ದರೆ, ಅವರೆಲ್ಲರೂ ನಿಮ್ಮ ಬಳಿ ಮಾತನಾಡುತ್ತಾರೆ. ಅದರಿಂದ ನೀವು ವಿಚಲಿತರಾಗುತ್ತೀರಿ. ನಿಮಗೆ ಸಮಯ ಪಾಲನೆ ಮಾಡಲು ಸಾಧ್ಯವಾಗುವುದಿಲ್ಲ. ಹೆಚ್ಚು ಸ್ನೇಹಿತರು ಇಲ್ಲದಿರುವುದೇ ನನ್ನ ಅದ್ಭುತ ಯಶಸ್ಸಿನ ಗುಟ್ಟು’’ ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ನಾಸಿರ್ ಹುಸೈನ್ ಬಿಸಿಸಿಐ ಡಾಟ್ ಟಿವಿಗಾಗಿ ನಡೆಸಿದ ಸಂದರ್ಶನದಲ್ಲಿ ಕೊಹ್ಲಿ ಹೇಳಿದ್ದಾರೆ.







