ಕಿನ್ನಿಗೋಳಿ: ಗುತ್ತಕಾಡಿನಲ್ಲಿ ‘ಹುಬ್ಬುರ್ರಸೂಲ್’ ಕಾರ್ಯಕ್ರಮ

ಮುಲ್ಕಿ, ಜ.15: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ವತಿಯಿಂದ ಕಿನ್ನಿಗೋಳಿಯ ಶಾಂತಿನಗರ ಗುತ್ತಕಾಡು ಮಸೀದಿ ಸಮೀಪದ ಮೈದಾನದಲ್ಲಿ ಹುಬ್ಬುರ್ರಸೂಲ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ನಿಮಿತ್ತ ‘ಪ್ರವಾದಿ ಜೀವನ ಮತ್ತು ಸಂದೇಶ’ ಹಾಗೂ ‘ಪ್ರೀತಿಪಾತ್ರಳಾದ ತಾಯಿ’ ವಿಷಯದ ಮೇಲೆ ಧಾರ್ಮಿಕ ವಿದ್ವಾಂಸರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು.
‘ಪ್ರವಾದಿ ಜೀವನ ಮತ್ತು ಸಂದೇಶ’ ವಿಷಯದ ಮೇಲೆ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯ ಕಾರ್ಯದರ್ಶಿ ಜಾಫರ್ ಸಾದಿಕ್ ಫೈಝಿ ಮಾತನಾಡಿ, ಪ್ರವಾದಿ ಮುಹಮ್ಮದ್(ಸ.ಅ)ರ ಜೀವನವು ಎಂದಿಗೂ ಮಾದರಿಯುತವಾದುದು. ಪ್ರವಾದಿ ಅನುಸರಿಸಿದ ಸಾಮಾಜಿಕ, ರಾಜಕೀಯ ಜೀವನ ಶೈಲಿ ಇಂದಿಗೂ ಪ್ರಸ್ತುತವಾಗಿದೆ. ಅನ್ಯಾಯ, ಕೆಡುಕುಗಳನ್ನು ವಿರೋಧಿಸುವುದರ ಜೊತೆಗೆ ಅದನ್ನು ತಡೆಗಟ್ಟುವಲ್ಲಿ ಪ್ರವಾದಿ ಮುಹಮ್ಮದ್(ಸ.ಅ) ಸಫಲರಾಗಿದ್ದರು. ಬಡವರು, ನಿರ್ಗತಿಕರ ಪರ ಅತೀ ಕಾಳಜಿ ಹೊಂದಿದ್ದ ಅವರ ಜೀವನ ಶೈಲಿಯನ್ನು ಪ್ರತಿಯೊಬ್ಬನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ಬಳಿಕ ‘ಪ್ರೀತಿಪಾತ್ರಳಾದ ತಾಯಿ’ ವಿಷಯದ ಮೇಲೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಸಮಿತಿ ಸದಸ್ಯ ಇಮ್ತಿಯಾಝ್ ತುಂಬೆ ಮಾತನಾಡಿ, ತಾಯಿಯಾದವಳು ಒಂದು ಮಗುವಿಗೆ ಜನ್ಮ ನೀಡಬೇಕಿದ್ದರೆ ಸಾಕಷ್ಟು ಸಂಕಟ ಪಡುವಳು. ಜನ್ಮ ನೀಡಿದ ಬಳಿಕವೂ ಮಗುವಿನ ನಿಸ್ವಾರ್ಥ ಆರೈಕೆ ಮಾಡುವಳು. ಆದರೆ ಮಗು ಬೆಳೆಯುತ್ತಲೇ ತಾಯಿಯನ್ನು ದ್ವೇಷಿಸುವ ಹಂತಕ್ಕೆ ತಲುಪುತ್ತಿರುವುದು ದುಃಖಕರ ಸಂಗತಿ. ತಾಯಿಯ ಪ್ರೀತಿಯನ್ನು ಕೊಡಲು ಯಾರಿಗೂ ಸಾಧ್ಯವಿಲ್ಲ. ಹೆತ್ತಬ್ಬೆಯನ್ನು ದೂರ ಮಾಡುವ ಮಕ್ಕಳು ಯಾವ ಕಾಲಕ್ಕೂ ಉದ್ಧಾರವಾಗಿರುವ ಉದಾಹರಣೇಗಳಿಲ್ಲ. ತಾಯಿಯ ಋಣ ತೀರಿಸಲು ಸಾಧ್ಯವೇ ಇಲ್ಲ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಎಫ್‌ಐ ಜಿಲ್ಲಾ ಸಮಿತಿ ಸದಸ್ಯ ಮೊಯ್ದಿನ್ ಹಳೆಯಂಗಡಿ ವಹಿಸಿದ್ದರು.
ವೇದಿಕೆಯಲ್ಲಿ ಗುತ್ತಕಾಡು ಖಿಲ್‌ರಿಯಾ ಜುಮ್ಮಾ ಮಸೀದಿ ಉಪಾಧ್ಯಕ್ಷ ಟಿ.ಕೆ. ಖಾದರ್, ಗ್ರೀನ್ ಸ್ಟಾರ್ ಅಧ್ಯಕ್ಷ ಗುಲಾಂ ಹುಸೈನ್, ಎಸ್‌ಡಿಪಿಐ ಗುತ್ತಕಾಡು ವಲಯಾಧ್ಯಕ್ಷ ನವಾಝ್ ಹುಸೈನ್, ಮುಸ್ಲಿಂ ವೆಲ್‌ಫೇರ್ ಎಜ್ಯುಕೇಶನ್ ಅಧ್ಯಕ್ಷ ಮುಹಮ್ಮದ್ ರಫೀಕ್, ಅನಿವಾಸಿ ಉದ್ಯಮಿ ಮುಸ್ತಫಾ ಕಲ್ಕರೆ, ನೂರುಲ್ ಹುದಾ ಎಸೋಸಿಯೆಶನ್ ಅಧ್ಯಕ್ಷ ಮುಹಮ್ಮದ್ ಕಬೀರ್, ಪಿಎಫ್‌ಐ ಘಟಕಾಧ್ಯಕ್ಷ ಸಿದ್ದೀಕ್ ಉಪಸ್ಥಿತರಿದ್ದರು.







