ನೋಟ್ ಬ್ಯಾನ್: ಭಾರತದ ಆರ್ಥಿಕ ಬೆಳವಣಿಗೆ ದರವನ್ನು ಶೇ.6.6ಕ್ಕೆ ಇಳಿಸಿದ ಐಎಂಎಫ್
ವಾಶಿಂಗ್ಟನ್,ಜ.16: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರವನ್ನು ಶೇ.7.6 ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯು, (ಐಎಂಎಫ್) ಈ ಹಿಂದೆ ಅಂದಾಜಿಸಿದ್ದರೂ, ನಗದು ಅಮಾನ್ಯದಿಂದಾಗಿ ‘ಗ್ರಾಹಕರಲ್ಲಿ ತಾತ್ಕಾಲಿಕವಾದ ಆಘಾತ’ ಉಂಟಾಗಿರುವ ಹಿನ್ನೆಲೆಯಲ್ಲಿ ಈಗ ಅದನ್ನು ಶೇ.6.6ಕ್ಕೆ ಇಳಿಸಿದೆ. ಭಾರತದ ಅಂದಾಜು ಬೆಳವಣಿಗೆ ದರದಲ್ಲಿ ವಿಶ್ವಬ್ಯಾಂಕ್ ಇಳಿಕೆ ಮಾಡಿದ ಕೆಲವೇ ದಿನಗಳ ಬಳಿಕ ಐಎಂಎಫ್‌ನ ಈ ವರದಿ ಹೊರಬಿದ್ದಿದೆ. ‘‘ನಗದು ಅಮಾನ್ಯದಿಂದಾಗಿ ಬ್ಯಾಂಕ್‌ಗಳಿಂದ ಕರೆನ್ಸಿ ನೋಟುಗಳನ್ನು ಹಿಂಪಡೆಯುವಲ್ಲಿ ಹಾಗೂ ಹಣ ವಿನಿಮಯ ಪ್ರಕ್ರಿಯೆಯಲ್ಲಿ ಉಂಟಾಗಿರುವ ಅಡಚಣೆಗಳಿಂದಾಗಿ ಗ್ರಾಹಕರಲ್ಲಿ ತಾತ್ಕಾಲಿಕವಾದ ಆರ್ಥಿಕ ಆಘಾತವುಂಟಾಗಿದ್ದು, ಈ ಕಾರಣದಿಂದಾಗಿ ಪ್ರಸಕ್ತ ಹಣಕಾಸು ವರ್ಷ (2016-17) ಹಾಗೂ ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ವಿತ್ತೀಯ ಬೆಳವಣಿಗೆ ದರವನ್ನು ಕ್ರಮವಾಗಿ ಶೇ.1 ಅಂಕ ಹಾಗೂ ಶೇ.0.4 ಅಂಕಗಳಿಗೆ ಇಳಿಸಲಾಗಿದೆ’’ ಎಂದು ಐಎಂಎಫ್ ತನ್ನ ನೂತನ ವಿಶ್ವ ಆರ್ಥಿಕ ಹೊರನೋಟ (ಡಬ್ಲುಇಒ) ವರದಿಯಲ್ಲಿ ತಿಳಿಸಿದೆ. 2018ರ ವೇಳೆಗೆ ಭಾರತದ ಆರ್ಥಿಕ ಬೆಳವಣಿಗೆಯು ಪುನಶ್ಚೇತನಗೊಂಡು, ತಾನು ನಿಗದಿಪಡಿಸಿದ್ದ್ನ ಹಿಂದಿನ ಅಂದಾಜು ಬೆಳವಣಿಗೆಯ ದರ ಶೇ.7.7ಕ್ಕೆ ತಲುಪಲು ಶಕ್ತವಾಗಲಿದೆಯೆಂದು ಡಬ್ಲುಇಒ ವರದಿ ತಿಳಿಸಿದೆ.





