24 ವಾರಗಳ ಭ್ರೂಣದ ಗರ್ಭಪಾತಕ್ಕೆ ಸುಪ್ರೀಂ ಅನುಮತಿ
ಹೊಸದಿಲ್ಲಿ,ಜ.16: ಭ್ರೂಣಕ್ಕೆ ತಲೆಬುರುಡೆಯಿಲ್ಲ ಎಂಬ ವೈದ್ಯಕೀಯ ವರದಿಗಳ ಹಿನ್ನೆಲೆಯಲ್ಲಿ 24 ವಾರಗಳ ಪ್ರಾಯದ ಭ್ರೂಣವನ್ನು ತೆಗೆಸಲು ಮುಂಬೈನ 23ರ ಹರೆಯದ ಮಹಿಳೆಯೋರ್ವಳಿಗೆ ಸರ್ವೋಚ್ಚ ನ್ಯಾಯಾಲಯವು ಅನುಮತಿಯನ್ನು ನೀಡಿದೆ. ತಾಯಿಯ ಜೀವವನ್ನುಳಿಸಲು ತಾನು ಗರ್ಭಪಾತಕ್ಕೆ ಅವಕಾಶ ನೀಡಿರುವುದಾಗಿ ಅದು ಹೇಳಿದೆ.
ಅಂಗವೈಕಲ್ಯದಿಂದ ಕೂಡಿರುವ ಭ್ರೂಣದ ಗರ್ಭಪಾತಕ್ಕೆ ಅನುಮತಿ ಕೋರಿ ಮಹಿಳೆ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದಳು. ಗರ್ಭಾವಸ್ಥೆಯು ಮುಂದುವರಿದರೆ ತಾಯಿಯ ಜೀವಕ್ಕೆ ಅಪಾಯವುಂಟಾಗಲಿದೆ ಎಂದು ಮುಂಬೈನ ಕೆಇಎಂ ಆಸ್ಪತ್ರೆಯ ವೈದ್ಯಕೀಯ ಮಂಡಳಿಯು ನ್ಯಾಯಾಲಯಕ್ಕೆ ತಿಳಿಸಿತ್ತು.
ಭ್ರೂಣದಲ್ಲಿ ತಲೆಬುರುಡೆ ರೂಪುಗೊಂಡಿಲ್ಲ ಎನ್ನುವುದು ಕಳೆದ ವರ್ಷದ ಡಿಸೆಂಬರ್ ನಲ್ಲಿ ಪರೀಕ್ಷೆಯ ವೇಳೆ ಬೆಳಕಿಗೆ ಬಂದಿತ್ತು.
ವೈದ್ಯಕೀಯ ಗರ್ಭಪಾತ ಕಾಯ್ದೆಯು 20 ವಾರಗಳವರೆಗಿನ ಭ್ರೂಣಗಳ ಗರ್ಭಪಾತಕ್ಕೆ ಮಾತ್ರ ಅವಕಾಶ ನೀಡುತ್ತದೆ. ಆದರೆ ತಾಯಿಯ ಜೀವಕ್ಕೆ ಅಪಾಯವಾಗುವಂತಿದ್ದರೆ ಈ ನಿಯಮದಿಂದ ವಿನಾಯಿತಿಯಿದೆ. ಸರ್ವೋಚ್ಚ ನ್ಯಾಯಾಲಯವು ಈ ಹಿಂದೆಯೂ ಇಂತಹ ಪ್ರಕರಣಗಳಲ್ಲಿ 20 ವಾರಗಳಿಗಿಂತ ಹೆಚ್ಚಿನ ಪ್ರಾಯದ ಭ್ರೂಣಗಳ ಗರ್ಭಪಾತಕ್ಕೆ ಅನುಮತಿ ನೀಡಿದೆ.





