ಕಾನೂನು ಪರೀಕ್ಷೆಯಲ್ಲಿ ಶೇ.90ರಷ್ಟು ವಿದ್ಯಾರ್ಥಿಗಳು ಫೇಲ್...!
ಆಗ್ರಾ, ಜ.16: ಬಿ.ಆರ್. ಅಂಬೇಡ್ಕರ್ ವಿಶ್ವವಿದ್ಯಾನಿಲಯದಲ್ಲಿ ವೌಲ್ಯಮಾಪನ ಪ್ರಕ್ರಿಯೆಯನ್ನು ಕಟ್ಟುನಿಟ್ಟುಗೊಳಿಸಲಾಗಿದ್ದು ಇದರ ಪರಿಣಾಮ ಗೋಚರವಾಗುತ್ತಿದೆ. ಐದು ವರ್ಷದ ಕಾನೂನು ಪದವಿಗೆ ಪರೀಕ್ಷೆ ಬರೆದಿರುವ 1,700 ವಿದ್ಯಾರ್ಥಿಗಳ ಫಲಿತಾಂಶವನ್ನು ವಿಶ್ವವಿದ್ಯಾನಿಲಯ ಪ್ರಕಟಿಸಿದ್ದು ಶೇ.90ರಷ್ಟು ವಿದ್ಯಾರ್ಥಿಗಳು ಫೇಲಾಗಿದ್ದಾರೆ. ಉಳಿದ 15 ಸಾವಿರ ವಿದ್ಯಾರ್ಥಿಗಳ ಫಲಿತಾಂಶವನ್ನು ಜನವರಿ 20ರಂದು ಪ್ರಕಟಿಸಲಾಗುವುದು ಎಂದು ವಿವಿಯ ಆಡಳಿತ ವರ್ಗ ತಿಳಿಸಿದೆ. ಅವ್ಯವಹಾರ ತಡೆಗಟ್ಟುವ ಉದ್ದೇಶದಿಂದ ಈ ಬಾರಿ ವಿಶ್ವವಿದ್ಯಾನಿಲಯದ ನೋಡಲ್ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿದೆ. 2016ರ ಡಿ.13ರಂದು ಉಪಕುಲಪತಿ ಯಾಗಿ ಅಧಿಕಾರ ವಹಿಸಿಕೊಂಡ ಅರವಿಂದ್ ದೀಕ್ಷಿತ್ ಹಲವೊಂದು ನಿಷ್ಠುರ ಕ್ರಮಗಳನ್ನು ಕೈಗೊಂಡಿದ್ದರು. ಇದರಂತೆ ನಿವೃತ್ತ ಶಿಕ್ಷಕರ ಮೇಲುಸ್ತುವಾರಿಯಲ್ಲಿ ಉತ್ತರ ಪತ್ರಿಕೆಯ ವೌಲ್ಯಮಾಪನ ನಡೆದಿತ್ತು. ಈ ಬಾರಿಯ ಪರೀಕ್ಷೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಖಾಲಿ ಉತ್ತರ ಪತ್ರಿಕೆಯನ್ನು ನೀಡಿದ್ದರೆ, ಬಹುತೇಕ ವಿದ್ಯಾರ್ಥಿಗಳು ಒಂದು ಅಥವಾ ಎರಡು ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿದ್ದು, ತೇರ್ಗಡೆಯಾಗಲು ಈ ಅಂಕಗಳು ಸಾಕಾಗುವಷ್ಟಿರಲಿಲ್ಲ. ಇದನ್ನು ಉಪಕುಲಪತಿಯ ಗಮನಕ್ಕೆ ತಂದಾಗ, ಮುಂದಿನ ದಿನದಲ್ಲಿ ಯಾವುದೇ ಅವ್ಯವಹಾರ ತಡೆಗಟ್ಟಲು ಎಲ್ಲಾ ಉತ್ತರಪತ್ರಿಕೆಗಳನ್ನು ಸ್ಕಾನ್ ಮಾಡಿಟ್ಟುಕೊಳ್ಳುವಂತೆ ಸೂಚಿಸಿದ್ದರು.
ಪರೀಕ್ಷೆಯಲ್ಲಿ ಖಾಲಿ ಉತ್ತರ ಪತ್ರಿಕೆಗಳನ್ನು ನೀಡುವಂತೆ ವಂಚಕರ ಜಾಲವು ವಿದ್ಯಾರ್ಥಿಗಳಿಗೆ ಸೂಚಿಸುತ್ತದೆ. ಬಳಿಕ ವಿಶ್ವ ವಿದ್ಯಾನಿಲಯದ ಕೆಳಹಂತದ ಸಿಬ್ಬಂದಿಗಳ ಬೆಂಬಲದಿಂದ ಈ ಖಾಲಿ ಹಾಳೆಗಳ ಜಾಗದಲ್ಲಿ ಉತ್ತರ ಬರೆದಿರುವ ಹಾಳೆಗಳನ್ನು ಸೇರಿಸಲಾಗುತ್ತದೆ ಎನ್ನಲಾಗಿದೆ. ಆದರೆ ಈ ಬಾರಿ ಹಲವು ಹೊಸ ಉಪಕ್ರಮಗಳನ್ನು ಜಾರಿಗೊಳಿಸಿದ ಕಾರಣ ಪರೀಕ್ಷೆಯಲ್ಲಿ ಅವ್ಯವಹಾರ ನಡೆಸಲು ಕಷ್ಟವಾಗಿದೆ ಎಂದು ವಿಶ್ವವಿದ್ಯಾನಿಲಯದ ವಕ್ತಾರ ಗಿರಿಜಾಶಂಕರ್ ಶರ್ಮ ಹೇಳಿದ್ದಾರೆ.







