ಮಹಾತ್ಮಾ ಗಾಂಧಿಯವರಿಗಿಂತ ಅಂಬೇಡ್ಕರ್ ‘ಮಹಾನ್ ನಾಯಕ’: ಉವೈಸಿ
ಸಂಭಲ್(ಉ.ಪ್ರ),ಜ.16: ಡಾಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಜಾತ್ಯತೀತ ಮತ್ತು ವರ್ಗರಹಿತ ಸಂವಿಧಾನವು ಸಮಾಜದಲ್ಲಿ ನ್ಯಾಯ ದೊರೆಯುವಂತೆ ಮಾಡಿರುವುದರಿಂದ ಅವರು ಮಹಾತ್ಮಾ ಗಾಂಧಿಯವರಿಗಿಂತ ‘ಮಹಾನ್ ನಾಯಕ’ರಾಗಿದ್ದಾರೆ ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಅವರು ಬಣ್ಣಿಸಿದ್ದಾರೆ.
ರಾಜಕೀಯವಾಗಿ ನಿರ್ಣಾಯಕವಾಗಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಪ್ರಚಾರದ ಅಂಗವಾಗಿ ನಿನ್ನೆ ಇಲ್ಲಿ ಹಮ್ಮಿಕೊಳ್ಳಲಾಗಿದ್ದ ಪಕ್ಷದ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ಅವರು, ಅಂಬೇಢ್ಕರ್ ಅವರು ಜಾತ್ಯತೀತ ಮತ್ತು ವರ್ಗರಹಿತ ಸಂವಿಧಾನವನ್ನು ನೀಡಿರದಿದ್ದರೆ ದೇಶದಲ್ಲಿ ಇಂದು ಅನ್ಯಾಯದ ಮಟ್ಟ ಎಷ್ಟೋ ಹೆಚ್ಚಾಗಿರುತ್ತಿತ್ತು ಮತ್ತು ಪರಿಸ್ಥಿತಿಯನ್ನು ಹದಗೆಡಿಸುವ ಯಾವುದೇ ಅವಕಾಶವನ್ನು ಆರೆಸ್ಸೆಸಿಗರು ಬಿಡುತ್ತಿರಲಿಲ್ಲ ಎಂದು ಹೇಳಿದರು.
ಖಾದಿ ಗ್ರಾಮೋದ್ಯೋಗ ಆಯೋಗದ ಕ್ಯಾಲೆಂಡರ್ ಸೃಷ್ಟಿಸಿರುವ ವಿವಾದ ಕುರಿತಂತೆ ಅವರು, ಪ್ರಧಾನಿ ನರೇಂದ್ರ ಮೋದಿಯವರು ತಾನು ಮಹಾತ್ಮಾ ಗಾಂಧಿಯವರ ಅನುಯಾಯಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ‘ಚರಕಾ’ವನ್ನು ಹಿಡಿಯಲು ಇದು ಸೂಕ್ತ ಸಮಯವೆಂದು ಭಾವಿಸಿರುವ ಅವರು ತನಗೆ ಅವಕಾಶ ಸಿಕ್ಕಿದಾಕ್ಷಣ ರಾಷ್ಟ್ರ ಸಂಕೇತಗಳಿಂದ ರಾಷ್ಟ್ರಪಿತನನ್ನೇ ಎತ್ತಂಗಡಿ ಮಾಡಿದ್ದಾರೆ ಎಂದರು.
ಪ್ರಧಾನಿಯವರ ವಿದೇಶಾಂಗ ನೀತಿಯನ್ನು ತರಾಟೆಗೆತ್ತಿಕೊಂಡ ಉವೈಸಿ, ಮೋದಿಯವರು ಪ್ರಧಾನಿ ಹುದ್ದೆಗೇರುವ ಮುನ್ನ ಪಾಕಿಸ್ತಾನಕ್ಕೆ ‘ತಕ್ಕ’ ಉತ್ತರವನ್ನು ನೀಡುವುದಾಗಿ ಹೇಳಿದ್ದರು. ಆದರೆ ಸರ್ಜಿಕಲ್ ದಾಳಿಯ ಬಳಿಕ ನಮ್ಮ 28 ಯೋಧರು ಹುತಾತ್ಮರಾಗಿದ್ದರೂ ಇಂತಹ ಉತ್ತರ ಇನ್ನೂ ಬರಬೇಕಿದೆ ಎಂದರು. ಕೇಂದ್ರದ ನೋಟು ರದ್ದತಿ ಕ್ರಮವನ್ನು ಟೀಕಿಸಿದ ಅವರು, ಇದು ಬಡವರಿಗೆ ತೊಂದರೆಯನ್ನುಂಟು ಮಾಡಿದೆಯೇ ಹೊರತು ಬೇರೆ ಯಾವುದೇ ಸಾಧನೆಯಾಗಿಲ್ಲ ಎಂದು ಹೇಳಿದರು.





