ಚೆನ್ನೈನಿಂದ ಬೆಂಗಳೂರಿಗೆ ಕೇವಲ ಅರ್ಧ ಗಂಟೆಯಲ್ಲೇ ಪ್ರಯಾಣಿಸಿ!
ಚೆನ್ನೈ,ಜ.16: ಚೆನ್ನೈನಿಂದ ಬೆಂಗಳೂರಿಗೆ ಕೇವಲ ಅರ್ಧ ಗಂಟೆಯಲ್ಲಿ ಪ್ರಯಾಣ, ಅದೂ ಭೂಮಿಯ ಮೂಲಕ... ವಿಮಾನಕ್ಕಿಂತ ವೇಗವಾಗಿ ! ಇದು ಕಲ್ಪನೆಯಲ್ಲ, ಹುಚ್ಚು ವೀಡಿಯೊ ಗೇಮೂ ಅಲ್ಲ. ಅಮೆರಿಕದ ಕಂಪೆನಿಯೊಂದು ಇಂತಹ ಪ್ರಸ್ತಾವವೊಂದನ್ನು ಮುಂದಿಟ್ಟಿದೆ.
ಜನರು ಊರೂರಿಗೆ ಪ್ರಯಾಣಿಸುವ ವಿಧಾನದಲ್ಲಿ ಕ್ರಾಂತಿಯನ್ನೇ ತರಬಲ್ಲ ಇಂತಹ ಮಹತ್ವಾಕಾಂಕ್ಷೆಯ ಯೋಜನೆಯೊಂದಿಗೆ ಈ ಕಂಪೆನಿಯು ಚೆನ್ನೈ ಮೇಲೆ ಕಣ್ಣಿರಿಸಿದೆ. ದಕ್ಷಿಣ ಆಫ್ರಿಕಾ ಸಂಜಾತ ಅಮೆರಿಕನ್ ಹೂಡಿಕೆದಾರ ಮತ್ತು ನವೋನ್ವೇಷಕ ಎಲನ್ ಮಸ್ಕ್ ಅವರ ‘ಬ್ರೇನ್ ಚೈಲ್ಡ್’ ಆಗಿರುವ ಹೈಪರ್‌ಲೂಪ್ ಒನ್ ಕಾಂಕ್ರಿಟ್ ಸ್ತಂಭಗಳ ಮೇಲೆ ನಿರ್ಮಿಸಲಾದ ಭಾರೀ ಗಾತ್ರದ ಕೊಳವೆಯಲ್ಲಿ ಪ್ರತಿ ಗಂಟೆಗೆ 1,200 ಕಿ.ಮೀ.ವೇಗದಲ್ಲಿ ಚಲಿಸುವ ಟ್ರಾವೆಲ್ ಪಾಡ್ ಅಥವಾ ರೈಲಿನ ಮೂಲಕ ಜನರನ್ನು ಸಾಗಿಸುವ ಪ್ರಸ್ತಾವನೆಯನ್ನು ಮುಂದಿರಿಸಿದೆ. ಕೊಳವೆಯಲ್ಲಿ ನಿರ್ವಾತ ಪ್ರದೇಶವಿರುವುದರಿಂದ ರೈಲು ಈ ವೇಗವನ್ನು ಪಡೆಯುವುದು ಸಾಧ್ಯವಾಗುತ್ತದೆ.
ಈ ಯೋಜನೆ ಸಾಕಾರಗೊಂಡರೆ ಜನರು ಚೆನ್ನೈನಿಂದ ಕೇವಲ 30 ನಿಮಿಷಗಳಲ್ಲಿ ಬೆಂಗಳೂರು ತಲುಬಹುದು. ಮುಂಬೈಗೆ ಒಂದು ಗಂಟೆಗಿಂತ ಸ್ವಲ್ಪ ಹೆಚ್ಚಿನ ಸಮಯ ಬೇಕಾಗುತ್ತದೆ.
ಹೈಪರ್‌ಲೂಪ್ ಒನ್‌ಗಾಗಿ ತಾನು ಆಸಕ್ತಿ ಹೊಂದಿರುವ ಮಾರ್ಗಗಳನ್ನು ಕಂಪೆನಿಯು ಇತ್ತೀಚಿಗೆ ಟ್ವೀಟ್ ಮಾಡಿದೆ. ಚೆನ್ನೈ-ಬೆಂಗಳೂರು, ಚೆನ್ನೈ-ಮುಂಬೈ, ಬೆಂಗಳೂರು-ತಿರುವನಂತಪುರಂ ಮತ್ತು ಮುಂಬೈ-ದಿಲ್ಲಿ ಮಾರ್ಗಗಳು ಇವುಗಳಲ್ಲಿ ಸೇರಿವೆ.
ಹೈಪರ್‌ಲೂಪ್ ಈಗಾಗಲೇ ಆಶಯ ಪತ್ರದೊಂದಿಗೆ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ವನ್ನು ಸಂಪರ್ಕಿಸಿದೆ. ಈ ಮಾರ್ಗಗಳು ಬುಲೆಟ್ ರೈಲುಗಳನ್ನು ಓಡಿಸಲು ಉದ್ದೇಶಿಸಲಾಗಿರುವ ಮಾರ್ಗಗಳಾಗಿದ್ದು, ಚೆನ್ನೈ-ಬೆಂಗಳೂರು ಮಧ್ಯೆ ಈ ರೈಲುಗಳ ಸಂಚಾರಕ್ಕೆ ಸೂಕ್ತವಾದ ಹಳಿಗಳನ್ನು ಅಳವಡಿಸಲು ಸಾಧ್ಯವೇ ಎಂಬ ಬಗ್ಗೆ ಜಪಾನ್ ಮತ್ತು ಚೀನಾಗಳ ತಂಡಗಳು ಈಗಾಗಲೇ ಅಧ್ಯಯನವನ್ನು ಆರಂಭಿಸಿವೆ.
ಬಸ್ ಪ್ರಯಾಣ ದರದಲ್ಲಿ ತಾನು ಜನರನ್ನು ಸಾಗಿಸಬಲ್ಲೆ ಎಂದು ಹೈಪರ್‌ಲೂಪ್ ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ. ಅದು ಪ್ರಯಾಣಕ್ಕೆ ಅಲ್ಲ...ಪ್ರಯಾಣದ ಅವಧಿಗೆ ಶುಲ್ಕ ವಿಧಿಸಲಿದೆ. ಸ್ತಂಭಗಳ ಮೇಲೆ ತಾನು ಫ್ಯಾಬ್ರಿಕೇಟೆಡ್ ಟ್ಯೂಬ್‌ಗಳನ್ನು ಅಳವಡಿಸಲಿದ್ದು, ಇದು ವೆಚ್ಚವನ್ನು ತಗ್ಗಿಸುವ ಜೊತೆಗೆ ನಿರ್ಮಾಣ ಅವಧಿಯನ್ನೂ ಕಡಿಮೆಯಾಗಿಸಲಿದೆ ಎಂದು ಅದು ತಿಳಿಸಿದೆ. ಟ್ಯೂಬ್‌ಗಳ ಮೇಲೆ ಅಳವಡಿಸಲಾಗುವ ಸೌರಫಲಕಗಳು ಮತ್ತು ಸ್ತಂಭಗಳು ಹೊಂದಿರುವ ಗಾಳಿಯಂತ್ರಗಳು ಅಗ್ಗದ ವಿದ್ಯುತ್‌ನ್ನು ನೀಡುವ ಮೂಲಕ ನಿರ್ವಹಣೆ ವೆಚ್ಚ ಇನ್ನಷ್ಟು ತಗ್ಗಲಿದೆ. ಈ ಟ್ಯೂಬ್ ರೈಲು ತನ್ನ ಚಲನೆಗೆ ಆಯಸ್ಕಾಂತೀಯ ವ್ಯವಸ್ಥೆಯನ್ನು ಬಳಸಿಕೊಳ್ಳಲಿದೆ. ಪ್ರಯಾಣದ ಆರಂಭದಲ್ಲಿ ಮಾತ್ರ ಇದಕ್ಕೆ ಶಕ್ತಿಯ ಅಗತ್ಯವಿದ್ದು, ಒಮ್ಮೆ ಅತ್ಯುನ್ನತ ವೇಗವನ್ನು ತಲುಪಿದರೆ 200 ಮೈಲುಗಳಿಗೂ ಹೆಚ್ಚಿನ ದೂರವನ್ನು ಜಾರುತ್ತಲೇ ಕ್ರಮಿಸುತ್ತದೆ ಎಂದು ಕಂಪೆನಿಯು ತಿಳಿಸಿದೆ.
ಇಂತಹ ಮೊದಲ ಟ್ಯೂಬ್ ಮಾರ್ಗ ಮುಂದಿನ ಐದು ವರ್ಷಗಳಲ್ಲಿ ದುಬೈ ಮತ್ತು ಅಬುಧಾಬಿ ನಡುವೆ ಅಸ್ತಿತ್ವಕ್ಕೆ ಬರುವ ನಿರೀಕ್ಷೆಯಿದೆ. ಅದು ಪ್ರಯಾಣದ ಅವಧಿಯನ್ನು 90 ನಿಮಿಷಗಳಿಂದ 12 ನಿಮಿಷಗಳಿಗೆ ತಗ್ಗಿಸಲಿದೆ !
ಆದರೆ ಭಾರತೀಯ ರೈಲ್ವೆ ಇಲಾಖೆಯ ಇಂಜಿನಿಯರ್‌ಗಳಿಗೆ ಈ ಯೋಜನೆಯ ಬಗ್ಗೆ ಶಂಕೆಯಿದೆ. ಅಧಿಕ ವೇಗದ ಸಂಪರ್ಕ ಸಾಧಿಸುವ ಯಾವುದೇ ಯೋಜನೆಯಾದರೂ ಒಳ್ಳೆಯದೇ. ಆದರೆ ವಿವಿಧ ಕಾರಣಗಳಿಂದಾಗಿ ಇಂತಹ ಯೋಜನೆ ಆರಂಭಗೊಳ್ಳಲೇ ದಶಕಕ್ಕೂ ಹೆಚ್ಚು ಸಮಯ ಬೇಕಾಗಬಹುದು ಎಂದು ಅವರು ಹೇಳಿದ್ದಾರೆ.
ಅತಿವೇಗದ ರೈಲುಗಳು ಚಲಿಸುವ ಒಂದು ಕಿಮೀ ಉದ್ದದ ಹೈಸ್ಪೀಡ್ ಲೈನ್ ನಿರ್ಮಾಣಕ್ಕೆ 300 ಕೋ.ರೂ.ವೆಚ್ಚವಾಗುತ್ತದೆ. ಆದರೆ ತನ್ನ ಸ್ಯಾನ್‌ಫ್ರಾನ್ಸಿಸ್ಕೋ-ಲಾಸ್ ಏಂಜಲಿಸ್ ಯೋಜನೆಯನ್ನು ಉಲ್ಲೇಖಿಸಿರುವ ಹೈಪರ್‌ಲೂಪ್ ತಾನು ಕೇವಲ 72 ಕೋ.ರೂ.ವೆಚ್ಚದಲ್ಲಿ ಅಷ್ಟೇ ಉದ್ದದ ಮಾರ್ಗವನ್ನು ನಿರ್ಮಿಸಬಲ್ಲೆ ಎಂದು ಹೇಳಿದೆ.





