ಎಟಿಎಂನಿಂದ ಶುಲ್ಕರಹಿತ ಹಣ ಪಡೆಯುವುದಕ್ಕೆ ಅಂಕುಶ!
ಗ್ರಾಹಕರಿಗೆ ಇನ್ನೊಂದು ಬರೆ
ಮುಂಬೈ, ಜ.16: ಅಗತಕ್ಕೆ ತಕ್ಕಷ್ಟು ಹಣವನ್ನು ಎಟಿಎಂನಿಂದ ಪಡೆಯುವುದು ತ್ರಾಸದಾಯಕ ಎಂಬ ಜನರ ಗೋಳಾಟದ ಮಧ್ಯೆಯೇ ಈಗ ಇನ್ನೊಂದು ಆಘಾತದ ಸುದ್ದಿ ಜನರಿಗೆ ಎದುರಾಗುವ ನಿರೀಕ್ಷೆಯಿದೆ. ಇನ್ನು ಮುಂದೆ ಎಟಿಎಂನಿಂದ ಶುಲ್ಕರಹಿತ ಹಣ ಮರಳಿ ಪಡೆಯುವ ಅವಕಾಶವನ್ನು ತಿಂಗಳಿಗೆ ಮೂರಕ್ಕೆ ಇಳಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಪ್ರಸ್ತುತ ಹೆಚ್ಚಿನ ಬ್ಯಾಂಕ್‌ಗಳು ತಮ್ಮಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ತಿಂಗಳಿಗೆ ಐದು ಬಾರಿ ಶುಲ್ಕರಹಿತ ಹಣ ಪಡೆಯುವ ಅವಕಾಶ ನೀಡಿವೆ. ಆ ಬಳಿಕದ ಪ್ರತಿಯೊಂದು ವ್ಯವಹಾರಕ್ಕೂ 20 ರೂ. ವ್ಯವಹಾರ ಶುಲ್ಕ, ಜೊತೆಗೆ ಸೇವಾ ತೆರಿಗೆ ವಿಧಿಸಲಾಗುತ್ತಿದೆ.
ಬ್ಯಾಂಕ್‌ಗಳು ಸಲ್ಲಿಸಿದ್ದ ಈ ಪ್ರಸ್ತಾವನೆಯ ಬಗ್ಗೆ ವಿತ್ತ ಸಚಿವಾಲಯದೊಂದಿಗೆ ನಡೆದ ಬಜೆಟ್‌ಪೂರ್ವ ಸಮಾಲೋಚನಾ ಸಭೆಯಲ್ಲಿ ಚರ್ಚೆ ನಡೆದಿದ್ದು, ಡಿಜಿಟಲ್ ವ್ಯವಹಾರದತ್ತ ಜನರನ್ನು ಸೆಳೆಯಲು ಇದು ಒಂದು ದಾರಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ಬ್ಯಾಂಕ್ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಈ ಹಿಂದೆ ಇದ್ದ ಸ್ಥಿತಿಗೂ ಈಗಿರುವ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ. ನಾವು ಕೂಡಾ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳಬೇಕು. ತಿಂಗಳಿಗೆ ಕೇವಲ ಮೂರು ಬಾರಿ ಎಟಿಎಂ ವ್ಯವಹಾರ ಉಚಿತ ಎಂದಾಗ ಜನರು ಡಿಜಿಟಲ್ ವ್ಯವಹಾರದತ್ತ ಮುಂದಾಗುವುದು ಅನಿವಾರ್ಯವಾಗುತ್ತದೆ ಎಂದು ಖಾಸಗಿ ಬ್ಯಾಂಕ್‌ನ ಓರ್ವ ಅಧಿಕಾರಿ ತಿಳಿಸಿದ್ದಾರೆ. ಪ್ರಸ್ತುತ ಹೆಚ್ಚಿನ ಬ್ಯಾಂಕ್‌ಗಳು ತಮ್ಮಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ತಿಂಗಳಿಗೆ ಐದು ಬಾರಿ ಶುಲ್ಕರಹಿತ ಹಣ ಪಡೆಯುವ ಅವಕಾಶ ನೀಡಿವೆ. ಆ ಬಳಿಕದ ಪ್ರತಿಯೊಂದು ವ್ಯವಹಾರಕ್ಕೂ 20 ರೂ. ವ್ಯವಹಾರ ಶುಲ್ಕ, ಜೊತೆಗೆ ಸೇವಾ ತೆರಿಗೆ ವಿಧಿಸಲಾಗುತ್ತಿದೆ.ತಮ್ಮ ಗ್ರಾಹಕರಲ್ಲದವರಿಗೆ ಬ್ಯಾಂಕ್‌ಗಳು ಮೂರು ಬಾರಿ (ಮುಂಬೈ, ಹೊಸದಿಲ್ಲಿ, ಚೆನ್ನೈ, ಕೋಲ್ಕತಾ, ಬೆಂಗಳೂರು ಮತ್ತು ಹೈದರಾಬಾದ್- ಈ ಪ್ರಮುಖ ಮೆಟ್ರೋ ನಗರಗಳಲ್ಲಿ) ಉಚಿತವಾಗಿ ಎಟಿಎಂ ಮೂಲಕ ಹಣ ಪಡೆಯುವ ಅವಕಾಶ ನೀಡಿದೆ. ಉಳಿದ ನಗರಗಳಲ್ಲಿ ಐದು ಉಚಿತ ವ್ಯವಹಾರದ ಅವಕಾಶವಿದೆ. 2014ರ ನವೆಂಬರ್‌ನಿಂದಲೂ ಈ ನಿಯಮ ಜಾರಿಯಲ್ಲಿದೆ. ಕಳೆದ ನವೆಂಬರ್‌ನಿಂದ ಎಟಿಎಂ ವ್ಯವಹಾರ ಇಳಿಮುಖಗೊಂಡಿದ್ದು ಶೇ.10ರಿಂದ 20ರಷ್ಟು ವ್ಯವಹಾರ ಮಾತ್ರ ಸಾಗಿದೆ. ಇದೇ ರೀತಿ ಮುಂದುವರಿದರೆ ವೆಚ್ಚ ಹೆಚ್ಚಾಗುವುದಲ್ಲದೆ ಎಟಿಎಂ ವ್ಯವಹಾರಕ್ಕೆ ತೊಂದರೆಯಾಗಬಹುದು ಎಂದು ಬಹುತೇಕ ಬ್ಯಾಂಕ್‌ಗಳ ಅಭಿಪ್ರಾಯವಾಗಿದೆ.







