ಬೆರಳೆಣಿಕೆಯಷ್ಟು ಮಂದಿಯ ಬಳಿ ಇದೆ ಇಡೀ ವಿಶ್ವದ ಅರ್ಧದಷ್ಟು ಸಂಪತ್ತು !
ಬೆಚ್ಚಿ ಬೀಳಿಸುವ ಮಾಹಿತಿಗಳು

ದಾವೋಸ್, ಜ.17: ವಿಶ್ವದಲ್ಲಿ ಅಗರ್ಭ ಶ್ರೀಮಂತರು ಹಾಗೂ ಬಡವರ ನಡುವಿನ ಕಂದಕ ನಾವು ಕಲ್ಪಿಸಿಕೊಳ್ಳಲು ಅಸಾಧ್ಯವಾದಷ್ಟು ಮಟ್ಟಿಗೆ ಬೆಳೆದಿದೆ. ಬಿಲ್ ಗೇಟ್ಸ್ ಹಾಗೂ ಮೈಕೆಲ್ ಬ್ಲೂಮ್‌ಬರ್ಗ್ ಸೇರಿದಂತೆ ಕೇವಲ ಎಂಟು ಮಂದಿ, ವಿಶ್ವದಲ್ಲಿ 360 ಕೋಟಿ ಮಂದಿ ಹೊಂದಿರುವಷ್ಟು ಸಂಪತ್ತು ಹೊಂದಿದ್ದಾರೆ ಎನ್ನುವ ಬೆಚ್ಚಿಬೀಳಿಸುವ ಮಾಹಿತಿಯನ್ನು ಆಕ್ಸ್‌ಫ್ಯಾಮ್ ಹೊರಹಾಕಿದೆ.
ದಾವೋಸ್‌ನ ಸ್ವಿಸ್ ಸ್ಕೈ ರೆಸಾರ್ಟ್‌ನಲ್ಲಿ ನಡೆಯುವ ವಿಶ್ವದ ರಾಜಕೀಯ ಹಾಗೂ ಉದ್ಯಮಿ ಗಣ್ಯರ ವಾರ್ಷಿಕ ಸಮಾವೇಶಕ್ಕೆ ಮುನ್ನ ಈ ಮಾಹಿತಿಯನ್ನು ಬಡತನ ವಿರೋಧಿ ಸಂಸ್ಥೆಯಾದ ಆಕ್ಸ್‌ಫ್ಯಾಮ್ ಹೊರಹಾಕಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಬಡವ-ಬಲ್ಲಿದರ ಅಂತರ ಮತ್ತಷ್ಟು ಹೆಚ್ಚಿದೆ. ಈ ಸಮಸ್ಯೆ ನಿವಾರಣೆಗೆ ನಾಯಕರ ಬಾಯಿಮಾತಿನ ಭರವಸೆ ಸಾಲದು ಎನ್ನುವುದು ಸಂಸ್ಥೆಯ ಸ್ಪಷ್ಟ ಅಭಿಪ್ರಾಯ.
ಡೊನಾಲ್ಡ್ ಟ್ರಂಪ್ ಅವರ ಆಯ್ಕೆ, ಯೂರೋಪಿಯನ್ ಒಕ್ಕೂಟದಿಂದ ಬ್ರಿಟನ್ ನಿರ್ಗಮನದ ಪರ ಜನರ ಒಲವಿನಂಥ ಕಂಪನಕಾರಿ ರಾಜಕೀಯ ಬದಲಾವಣೆಗಳು ಸಂಭವಿಸಿದಿದ್ದರೆ, ಇಂತಹ ಅಸಮಾನತೆ ವಿರುದ್ಧದ ಸಾರ್ವಜನಿಕ ಆಕ್ರೋಶ ಮತ್ತಷ್ಟು ಹೆಚ್ಚುವ ಅಪಾಯವಿದೆ ಎಂದು ಸಂಸ್ಥೆ ಎಚ್ಚರಿಸಿದೆ.
ಕಳೆದ ವರ್ಷ ಇದೇ ಸಂಸ್ಥೆ ಬಿಡುಗಡೆ ಮಾಡಿದ ವರದಿಯಲ್ಲಿ, ವಿಶ್ವದ 62 ಮಂದಿ ಅಗರ್ಭ ಶ್ರೀಮಂತರು ವಿಶ್ವದ ಅರ್ಧ ಮಂದಿ ಬಡವರು ಹೊಂದಿರುವಷ್ಟು ಸಂಪತ್ತು ಹೊಂದಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿತ್ತು. ಆದರೆ ಇದನ್ನು ಪರಿಷ್ಕರಿಸಿ ಹೊಸ ವರದಿ ಬಿಡುಗಡೆ ಮಾಡಲಾಗಿದೆ.
ಮೈಕ್ರೊಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಇಂಡಿಟೆಕ್ಸ್ ಫ್ಯಾಷನ್ ಹೌಸ್ ಸಂಸ್ಥಾಪಕ ಅಮನ್ಸಿಯೊ ಒರ್ಟೆಗಾ, ಫೈನಾನ್ಸರ್ ವಾರ್ರನ್ ಬಫೆಟ್, ಮೆಕ್ಸಿಕೋದ ವ್ಯಾಪಾರ ದೈತ್ಯ ಕಾರ್ನೋಸ್ ಸ್ಲಿಮ್ ಹೆಲು, ಅಮೆಝಾಬ್ ಮುಖ್ಯಸ್ಥ ಜೆಫ್ ಬೆಝೋಸ್, ಫೇಸ್‌ಬುಕ್‌ನ ಮಾರ್ಕ್ ಝುಕೆರ್‌ಬರ್ಗ್, ಒರೇಕಲ್ ಸಂಸ್ಥಾಪಕ ಲಾರ್ರಿ ಎಲ್ಲಿಸನ್, ಲಂಡನ್‌ನ ಮಾಜಿ ಮೇಯರ್ ಮೈಕೆಲ್ ಬ್ಲೂಮ್‌ಬರ್ಗ್ ಅಗರ್ಭ ಶ್ರೀಮಂತ ಪಟ್ಟಿಯ ಅಗ್ರಗಣ್ಯರು.







