ಸಲಿಂಗಿಗಳ ವೆಬ್‌ಸೈಟ್ ಮೂಲಕ ಗೆಳೆತನಕ್ಕೆ ಭಾರಿ ಬೆಲೆ ತೆತ್ತ ಪೊಲೀಸ್!

ಮುಂಬೈ, ಜ.17: ಸಲಿಂಗಿಗಳ ವೆಬ್‌ಸೈಟ್ ಮೂಲಕ ಗೆಳೆತನ ಮಾಡಿದ ಪೊಲೀಸ್ ಪೇದೆಯೊಬ್ಬ ತನ್ನ ಖಯಾಲಿಗೆ ಭಾರಿ ಬೆಲೆ ತೆತ್ತಿದ್ದಾನೆ. ಈ ವೆಬ್‌ಸೈಟ್ ಮೂಲಕ ಪರಿಚಯವಾದ ವ್ಯಕ್ತಿ ತನ್ನ ಸಹಚರರ ಜತೆ ಪೊಲೀಸ್ ಪೇದೆಯನ್ನು ಡೇಟಿಂಗ್‌ಗೆ ಆಹ್ವಾನಿಸಿ, ಮೊಬೈಲ್, ಚಿನ್ನದ ಸರ ಹಾಗೂ ನಗದು ಸೇರಿದಂತೆ ಎಲ್ಲ ವಸ್ತುಗಳನ್ನು ಕಿತ್ತುಕೊಂಡು ಮೇಲೆ ಹಲ್ಲೆ ಮಾಡಿದ್ದಾಗಿ ಆರೋಪಿಸಲಾಗಿದೆ.
29 ವರ್ಷದ ಈ ಪೊಲೀಸ್ ಪೇದೆ ನೀಡಿದ ದೂರಿನಲ್ಲಿ ತನ್ನ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಲಾಗಿದೆ ಎಂದಷ್ಟೇ ಉಲ್ಲೇಖಿಸಿದ್ದ. ಜಾವೇದ್ ಶೇಖ್ ಅಲಿಯಾಸ್ ಅರ್ಬರ್ (24) ಎಂಬ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರಿಗೂ ಸಲಿಂಗಿ ವೆಬ್ ಸೈಟ್ ನಲ್ಲಿ ಪರಿಚಯವಾಗಿತ್ತು. ಶೇಕ್ ಇದೇ ತಂತ್ರ ಬಳಸಿಕೊಂಡು ಮತ್ತೊಬ್ಬನನ್ನು ದೋಚಲು ಯೋಚಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಖಾನ್‌ಭಾಯ್2 ಯೂಸರ್‌ನೇಮ್ ಹೊಂದಿದ್ದ ವ್ಯಕ್ತಿಯನ್ನು ವೆಬ್‌ಸೈಟ್‌ನಲ್ಲಿ ದೂರುದಾರ ಪೊಲೀಸ್ 2016ರ ಡಿಸೆಂಬರ್‌ನಲ್ಲಿ ಭೇಟಿಯಾಗಿದ್ದ. ಇಬ್ಬರೂ ಚಾಟಿಂಗ್ ಮಾಡಿ ಬಳಿಕ ಫೋನ್‌ನಂಬರ್ ವಿನಿಮಯ ಮಾಡಿಕೊಂಡಿದ್ದಾರೆ. ಇಬ್ಬರೂ ಜನವರಿ 2ರಂದು ಶ್ರೇಯಸ್ ಸಿನೆಮಾ ಬಳಿ ಭೇಟಿ ಮಾಡಲು ನಿರ್ಧರಿಸಿದ್ದರು. ಭೇಟಿ ಬಳಿಕ ಶೇಖ್, ಪಕ್ಕದಲ್ಲೇ ತನ್ನ ಮನೆ ಇರುವುದಾಗಿ ನಂಬಿಸಿ ಆಹ್ವಾನ ನೀಡಿದ್ದ. ಚಟ್ಕೋಪರ್ ಹಾಗೂ ವಿಕ್ರೋಲಿ ನಡುವೆ ಮನೆ ಇದ್ದು, ರೈಲ್ವೆ ಹಳಿ ಮೂಲಕ ನಡೆದುಕೊಂಡು ಹೋಗೋಣ ಎಂದು ಪುಸಲಾಯಿಸಿ ಈ ಕೃತ್ಯ ಎಸಗಿದ್ದಾನೆ ಎಂದು ಕುರ್ಲಾ ರೈಲ್ವೆ ನಿಲ್ದಾಣ ಪೊಲೀಸರು ವಿವರಿಸಿದ್ದಾರೆ.







