ಸೆಲ್ಫಿ ಗೀಳಿಗೆ ಮತ್ತಿಬ್ಬರು ಬಾಲಕರು ಬಲಿ

ಹೊಸದಿಲ್ಲಿ, ಜ.17: ಸೆಲ್ಫಿ ಗೀಳು ಮತ್ತೆರಡು ಯುವ ಜೀವಗಳನ್ನು ಬಲಿ ಪಡೆದಿದೆ. ಅದು ಕೂಡಾ ರಾಷ್ಟ್ರರಾಜಧಾನಿಯಲ್ಲಿ. ಪೂರ್ವ ದಿಲ್ಲಿಯ ಆನಂದ್ ವಿಹಾರದಲ್ಲಿ ಎರಡು ರೈಲ್ವೆ ಟ್ರ್ಯಾಕ್‌ಗಳ ನಡುವೆ ಸೆಲ್ಫಿಗೆ ಫೋಸ್ ನೀಡುತ್ತಿದ್ದ ಹದಿಹರೆಯದ ಬಾಲಕರಿಬ್ಬರು ರೈಲಿನಡಿ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಯಶ್‌ಕುಮಾರ್ (16) ಹಾಗೂ ಶುಭಂ (14), ಟ್ಯೂಷನ್ ಸೆಂಟರ್‌ನ ಐದು ಮಂದಿ ಸ್ನೇಹಿತರ ಜತೆ ಹಣ ಸಂಗ್ರಹಿಸಿ ದಿನಕ್ಕೆ 400 ರೂಪಾಯಿ ಬಾಡಿಗೆಗೆ ಎಸ್‌ಎಲ್‌ಆರ್ ಕ್ಯಾಮೆರಾ ಪಡೆದಿದ್ದಾರೆ. ಮಾಡೆಲಿಂಗ್ ಪೋರ್ಟ್‌ಫೋಲಿಯೊ ರೂಪಿಸುವುದು ಇವರ ಉದ್ದೇಶವಾಗಿತ್ತು.
ಇದಕ್ಕಾಗಿ ಹಿಂದಿನಿಂದ ರೈಲು ಸಮೀಪಿಸುತ್ತಿರುವಾಗ ಹಳಿಗಳ ನಡುವೆ ಸೆಲ್ಫಿ ತೆಗೆಸಿಕೊಳ್ಳುವ ನಿರ್ಧಾರಕ್ಕೆ ಬಂದರು. ಸೆಲ್ಫಿ ಸೆರೆಹಿಡಿಯುತ್ತಿದ್ದಾಗ ರೈಲು ಸನಿಹಕ್ಕೆ ಬರುತ್ತಿದ್ದಂತೆ ಮತ್ತೊಂದು ರೈಲು ವಿರುದ್ಧ ದಿಕ್ಕಿನಿಂದ ಬಂದದ್ದು ಅವರ ಗಮನಕ್ಕೆ ಬರಲಿಲ್ಲ. ಇತರರು ಪಕ್ಕದಲ್ಲಿ ನಿಂತು ನೋಡುತ್ತಿದ್ದಾಗಲೇ ಯಶ್ ಹಾಗೂ ಶುಭಂ, ಎರಡು ರೈಲುಗಳ ನಡುವೆ ಸಿಲುಕಬಹುದೆಂಬ ಭೀತಿಯಿಂದ ಪಕ್ಕದ ರೈಲು ಹಳಿಗೆ ಹಾರಿದರು. ಆಗ ಆ ಹಳಿಯಲ್ಲಿ ಬಂದ ರೈಲಿನಡಿಗೆ ಬಿದ್ದು ಸ್ಥಳದಲ್ಲೇ ಅಸುನೀಗಿದರು ಎಂದು ಪೊಲೀಸರು ಹೇಳಿದ್ದಾರೆ.
ದೇವಸ್ಥಾನದ ಎದುರು ನಿಂತು ತೆಗೆಸಿಕೊಂಡ ಸೆಲ್ಫಿ ಚೆನ್ನಾಗಿಲ್ಲ ಎಂಬ ಕಾರಣಕ್ಕೆ, ರೈಲು ಹಳಿಯಲ್ಲಿ ಡೇರಿಂಗ್ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದು ಇವರ ಯೋಜನೆಯಾಗಿತ್ತು.







