ಹರಿದ ಕುರ್ತಾವನ್ನು ವೇದಿಕೆಯಲ್ಲಿ ಪ್ರದರ್ಶಿಸಿದ ರಾಹುಲ್ ಗಾಂಧಿ..!

ಹೊಸದಿಲ್ಲಿ, ಜ.17: ಪ್ರಧಾನ ಮಂತ್ರಿ ನರೇಂದ್ರ ಮೋದಿ ಧರಿಸುವ ದುಬಾರಿ ಡ್ರೆಸ್ ಗಳ ಬಗ್ಗೆ ಮಾತನಾಡುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಉತ್ತರಾಖಂಡ್ ನ ರಿಶಿಕೇಶ್ ನಲ್ಲಿ ಜನರನ್ನುದ್ದೇಶಿಸಿ ಮಾತನಾಡುವಾಗ ತನ್ನ ಹರಿದ ಕುರ್ತಾವನ್ನು ಪ್ರದರ್ಶಿಸಿದರು.
ಸೋಮವಾರ 'ವಿಜಯ್ ಸಂಕಲ್ಪ' ಸಮಾವೇಶದಲ್ಲಿ ವೇದಿಕೆಯಲ್ಲಿ ದಿಢೀರನೆ ತನ್ನ ಮಾತನ್ನು ನಿಲ್ಲಿಸಿದ ರಾಹುಲ್ ಗಾಂಧಿ ತನ್ನ ಜಾಕೆಟ್ ನ್ನು ತೆಗೆದರು. ಬಳಿಕ ಅವರು ತನ್ನ ಹರಿದ ಕುರ್ತಾವನ್ನು ತೋರಿಸಿದರು. ಕುರ್ತಾದ ಜೇಬಿಗೆ ಕೈ ಹಾಕಿದರು. ಕೈ ಇನ್ನೊಂದು ಕಡೆಯಿಂದ ಕಂಡು ಬಂತು. ಇದಕ್ಕೆ ಸಹಜವಾಗಿಯೇ ಸಭಿಕರಿಂದ ಪ್ರಚಂಡ ಚಪ್ಪಾಳೆ ,ಮೆಚ್ಚುಗೆ ದೊರೆಯಿತು.
ಪ್ರಧಾನಿ ಮೋದಿ ಬಡವರ ಬಗ್ಗೆ ಮಾತನಾಡುತ್ತಾರೆ. ಆದರೆ ಅವರು ಧರಿಸುವ ಡ್ರೆಸ್ ನಲ್ಲಿ ಸರಳತೆ ಇಲ್ಲ. ಅವರು ದುಬಾರಿ ಮೌಲ್ಯದ ಡ್ರೆಸ್ ಧರಿಸುವುದನ್ನು ನಿಲ್ಲಿಸುವುದಿಲ್ಲ ‘’ ಎಂದು ಮತ್ತೆ ಮೋದಿ ವಿರುದ್ಧ ರಾಹುಲ್ ಹರಿಹಾಯ್ದರು.
"ನರೇಂದ್ರ ಮೋದಿ ಅವರು 15 ಲಕ್ಷ ರೂ. ಮೌಲ್ಯದ ಸೂಟ್ ಧರಿಸಿ ನೂಲುವ ಚಕ್ರದೊಂದಿಗೆ ಫೋಟೋ ತೆಗೆಸಿ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ .ಒಂದು ಕೈಯಲ್ಲಿ ನೂಲುವ ಚಕ್ರವನ್ನು ಹಿಡಿಯುವ ಮೋದಿ ಇನ್ನೊಂದು ಕೈಯಲ್ಲಿ ದೇಶದ ಅಗ್ರ ಕೈಗಾರಿಕೋದ್ಯಮಿಗಳ ಪರ ಕೆಲಸ ಮಾಡುತ್ತಾರೆ ''ಎಂದು ಆರೋಪಿಸಿದರು.







