ಇದು ಸುಪ್ರೀಂ ಕೋರ್ಟೇ ಅಥವಾ ಜೋಕ್ ಕೋರ್ಟೇ?
ಮುಖ್ಯ ನ್ಯಾಯಾಧೀಶರು ಇಷ್ಟು ಗರಂ ಆಗಲು ಕಾರಣ ಏನು ?

ಹೊಸದಿಲ್ಲಿ, ಜ.17: ತಪ್ಪು ಮಾಡಿದ ಮಕ್ಕಳನ್ನುಶಾಲಾ ತರಗತಿಯಲ್ಲಿ ಶಿಕ್ಷಕರು ತರಾಟೆಗೆ ತೆಗೆದುಕೊಂಡ ರೀತಿಯಲ್ಲಿಯೇ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ಅವರು ಸುಪ್ರೀಂ ಕೋರ್ಟ್ ವಕೀಲರನ್ನು ತರಾಟೆಗೆ ತೆಗೆದುಕೊಂಡಂತಹ ಘಟನೆ ನಡೆದಿದೆ. ವಕೀಲರು ಆಗಾಗ ಪ್ರಕರಣಗಳ ವಿಚಾರಣೆಯನ್ನು ಮುಂದೂಡಲು ಹೇಳುತ್ತಿರುವುದು ಪ್ರಾಯಶಃ ಜಸ್ಟಿಸ್ ಖೇಹರ್ ಅವರ ತಾಳ್ಮೆಯನ್ನು ಪರೀಕ್ಷಿಸಿದ್ದಿರಬಹುದು.
ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಯ ವಿಚಾರದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯೊಂದನ್ನು 2013ರಲ್ಲಿ ದಾಖಲಿಸಿದ್ದ ಎನ್ ಜಿ ಒ ಒಂದರ ಪರವಾಗಿ ವಾದಿಸುತ್ತಿದ್ದ ಕಿರಿಯ ವಕೀಲರೊಬ್ಬರು ಈ ಪ್ರಕರಣದ ಮುಖ್ಯ ವಕೀಲರು ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ದಿಲ್ಲಯಿಂದ ಹೊರಗೆ ಹೋಗಿರುವ ಕಾರಣ ಪ್ರಕರಣದ ವಿಚಾರಣೆ ಮುಂದೂಡಬೇಕೆಂದು ಹೇಳಿದ್ದೇ ತಡ ಜಸ್ಟಿಸ್ ಖೇಹರ್ ಕೆಂಡಾಮಂಡಲವಾಗಿದ್ದರು.
‘‘ಇದೇನು ಜೋಕ್ ಕೋರ್ಟೇ ಅಥವಾ ಸುಪ್ರೀಂ ಕೋರ್ಟೇ ? ಯಾವ ವಿಧದ ಕೋರ್ಟ್ ಇದು ? ನೀವು ನಮ್ಮೊಂದಿಗೆ ಜೋಕ್ ಮಾಡುತ್ತಿದ್ದೀರಿ. ಕೇಂದ್ರ ಹಾಗೂ ರಾಜ್ಯ ಸರಕಾರದ ಪ್ರತಿನಿಧಿಗಳು ವಿಚಾರಣೆಗಾಗಿ ಆಗಮಿಸಿದಾಗ ವಕೀಲರು ಕುಟುಂಬದ ಕಾರ್ಯಕ್ರಮಕ್ಕೆ ಹೋಗಿದ್ದಾರೆಂದು ನೀವು ಹೇಳುತ್ತೀರಿ ?’’ ಎಂದು ಅಂತಾರಾಷ್ಟ್ರೀಯ ಮಾನವ್ ಅಧಿಕಾರ್ ನಿಗ್ರಾಣಿ ಸಂಸ್ಥೆಯ ವಕೀಲರನ್ನುದ್ದೇಶಿಸಿ ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.
ಇದಕ್ಕೂ ಮೊದಲು ನದಿ ನೀರು ಮಾಲಿನ್ಯ ತಡೆ ಸಂಬಂಧದ 2012ರ ಸಾರ್ವಜನಿಕ ಹಿತಾಸಕ್ತಿ ದಾವೆಯೊಂದರ ವಿಚಾರವಾಗಿ ದಾಖಲೆಗಳನ್ನು ಸಲ್ಲಿಸುವಂತೆ ಹೇಳಲಾಗಿದ್ದ ವಕೀಲರೂ ಪ್ರಕರಣ ಮುಂದೂಡುವಂತೆ ಹೇಳಿದಾಗ ಮೇಲಿನ ಉತ್ತರವನ್ನೇ ನೀಡಲಾಯಿತು.
‘‘ಇಲ್ಲೇನು ಜೋಕ್ ಅಥವಾ ಬೇರಿನ್ನೇನಾದರೂ ನಡೆಯುತ್ತಿದೆಯೇ ? ನಿಮಗೆ ಉತ್ತರ ದಾಖಲಿಸಲು ಸಾಧ್ಯವಿಲ್ಲವಾದರೆ ನಮಗೆ ಹೇಳಿ ನಾವೇ ಮಾಡಿಕೊಳ್ಳುತ್ತೇವೆ,’’ ಎಂದು ಜಸ್ಟಿಸ್ ಖೇಹರ್ ಸಿಟ್ಟಿನಿಂದ ಹೇಳಿದ್ದರೆನ್ನಲಾಗಿದೆ.







