ಅಮ್ಮನ ಒಂದು ಪೆನ್ ನನಗೆ ಬೇಕು: ದೀಪಾ
ಫೆ.24ರಂದು ಅಧಿಕೃತವಾಗಿ ರಾಜಕೀಯ ಪ್ರವೇಶಕ್ಕೆ ದಿನ ನಿಗದಿ

ಚೆನ್ನೈ,ಜ.17: ತಮಿಳುನಾಡಿನ ಮಾಜಿ ಮುಖ್ಯ ಮಂತ್ರಿ ಜೆ. ಜಯಯಲಿತಾ ಅವರು ನಿಧನರಾಗಿ ಒಂದು ತಿಂಗಳ ಬಳಿಕ ಅವರ ಸೊಸೆ ದೀಪಾ ಜಯ ಕುಮಾರ್ ಇಂದು ರಾಜಕೀಯಕ್ಕೆ ಅಧಿಕೃತವಾಗಿ ಸೇರ್ಪಡೆಯಾಗುವ ಇಚ್ಛೆ ವ್ಯಕ್ತ ಪಡಿಸಿದ್ದಾರೆ.
42ರ ಹರೆಯದ ದೀಪಾ ಜಯ ಕುಮಾರ್ ಅವರು ಜಯಲಲಿತಾ ಅವರ ಏಕೈಕ ಸೋದರ ಜಯಕುಮಾರ್ ಪುತ್ರಿ. ದೀಪಾ ಫೆ..24ರಂದು ಅಧಿಕೃತವಾಗಿ ರಾಜಕೀಯ ಪ್ರವೇಶಕ್ಕೆ ಮುಹೂರ್ತ ನಿಗದಿ ಮಾಡಿದ್ದಾರೆ. ಅಂದು ಜಯಲಲಿತಾ ಹುಟ್ಟು ಹಬ್ಬದ ದಿನ. ಇದೇ ಕಾರಣದಿಂದಾಗಿ ದೀಪಾ ರಾಜಕೀಯ ಪ್ರವೇಶಕ್ಕೆ ಅದೇ ದಿನವನ್ನು ನಿದಗದಿಪಡಿಸಿದ್ದಾರೆ
ಜಯಲಲಿತಾ ಅವರ ಉತ್ತರಾಧಿಕಾರಿಯಾಗಿ ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ನಟರಾಜನ್ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಶಶಿಕಲಾ ಪಕ್ಷದ ನಾಯಕತ್ವ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಅತೃಪ್ತರಾಗಿರುವ ಗುಂಪಿನ ನಾಯಕತ್ವವನ್ನು ದೀಪಾ ವಹಿಸಿಕೊಂಡಿದ್ದಾರೆ. ಜಯಲಲಿತಾ ಅವರ ಪರಂಪರೆಯನ್ನು ಮುಂದುವರಿಸುವ ಹೋರಾಟಕ್ಕೆ ದೀಪಾ ಧುಮುಕಿದ್ದಾರೆ.
ಎಐಡಿಎಂಕೆ ಸ್ಥಾಪಕ ಎಂ.ಜಿ. ರಾಮಚಂದ್ರನ್ ಅವರ 100ನೆ ಜನ್ಮದಿನವಾಗಿರುವ ಮಂಗಳವಾರ ದೀಪಾ ಅವರು ಮರೀನಾ ಬೀಚ್ ಗೆ ತೆರಳಿ ಅಲ್ಲಿರುವ ಎಂಜಿಆರ್ ಮತ್ತು ತನ್ನ ಸೋದರತ್ತೆ ಜಯಲಲಿತಾ ಅವರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು“ಎಐಎಡಿಎಂಕೆ ಸೇರಿದಂತೆ ವಿವಿಧ ಪಕ್ಷಗಳಿಂದ ಆಹ್ವಾನ ಬಂದಿದೆ. ರಾಜ್ಯಾದ್ಯಂತ ಪ್ರವೇಶ ಕೈಗೊಂಡು ಮುಂದಿನ ನಿರ್ಧಾರ ಕೈಗೊಳ್ಳುವೆ. ರಾಜಕೀಯ ಸೇರಲು ಅರ್ಹತೆ, ಅನುಭವ , ಸರ್ಟಿಫಿಕೇಟ್ ಬೇಕಾಗಿಲ್ಲ. ರಾಜ್ಯದ ಜನತೆ ನನ್ನ ಭವಿಷ್ಯ ನಿರ್ಧರಿಸಲಿದ್ದಾರೆ. ಅಮ್ಮನಂತೆ ನಾನು ಇದ್ದೇನೆ. ಅಮ್ಮ ನನ್ನೊಂದಿಗೆ ಇದ್ದಾರೆ’’ ಎಂದು ದೀಪಾ ಹೇಳಿದರು.
ಎಐಎಡಿಎಂಕೆ ನೂತನ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಬಗ್ಗೆ ಏನನ್ನು ದೀಪಾ ಹೇಳಲಿಲ್ಲ. “ ಮಾಜಿ ಮುಖ್ಯ ಮಂತ್ರಿ ಜಯಲಲಿತಾ ಅವರ ಆಸ್ತಿ ನನಗೆ ಬೇಕಾಗಿಲ್ಲ. ಆದರೆ ಅವರು ಬಳಸುತ್ತಿದ್ದ ಒಂದು ಪೆನ್ ನನಗೆ ಬೇಕಾಗಿದೆ’’ ಎಂದು ದೀಪಾ ಅಭಿಪ್ರಾಯಪಟ್ಟರು.







