ದಂಗಲ್ ನಟಿ ಝೈರಾ ಬೆಂಬಲಕ್ಕೆ ಬಾಲಿವುಡ್ ನಟ ಆಮಿರ್ ಖಾನ್

ಹೊಸದಿಲ್ಲಿ, ಜ.17: ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಭೇಟಿ ಯಾಗಿರುವ ಕಾರಣಕ್ಕೆ ವಿವಾದಕ್ಕೆ ಸಿಲುಕಿರುವ ದಂಗಲ್ ನಟಿ ಝೈರಾ ವಸೀಂ ಅವರ ಬೆಂಬಲಕ್ಕೆ ಬಾಲಿವುಡ್ ನಟ ಆಮಿರ್ ಖಾನ್ ನಿಂತಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರನ್ನು ಝೈರಾ ಅವರು ಕೆಲ ದಿನಗಳ ಹಿಂದೆ ಭೇಟಿಯಾಗಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಕೆಲವರು ಝೈರಾ ಅವರು ಕ್ಷಮೆಯಾಚಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಬೆಳವಣಿಗೆಗಳ ಹಿನ್ನೆಲೆಯಲ್ಲಿ ಝೈರಾ ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಿದ್ದರು.
ಈ ಹಿನ್ನಲೆಯಲ್ಲಿ ಇದೀಗ ನಟ ಆಮಿರ್ ಖಾನ್ ಅವರು, “ನಾನು ಝೈರಾ ಹೇಳಿಕೆಯನ್ನು ಓದಿದೆ. ಆಕೆ ಈ ರೀತಿಯಾಗಿ ಹೇಳಿಕೆ ನೀಡಲು ಕಾರಣವಾಗಿರುವ ಆಕೆಯ ಪರಿಸ್ಥಿತಿಯನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ ಹಾಗೂ ಊಹಿಸಬಲ್ಲೆ. ಝೈರಾ ನಾನು ನಿಮಗೆ ತಿಳಿಸಬಯಸುವುದೇನೆಂದರೆ ನಾವೆಲ್ಲರೂ ನಿನ್ನೊಂದಿಗಿದ್ದೇವೆ. ಸೌಂದರ್ಯ ಎನ್ನುವುದು, ಪ್ರಕಾಶಮಾನವಾದ, ಯುವ, ಪ್ರತಿಭಾವಂತ, ಕಠಿಣಶ್ರಮ, ಗೌರವಾನ್ವಿತ, ಕಾಳಜಿ ಮತ್ತು ಧೈರ್ಯವಂತ ನಿಮ್ಮಂತಹ ಆದರ್ಶಯುತ ಮಕ್ಕಳಲ್ಲಿ ಇರುತ್ತದೆ. ಭಾರತದಲ್ಲಿ ಮಾತ್ರವಲ್ಲ, ಇಡೀ ಪ್ರಪಂಚಕ್ಕೂ ನೀವು ಮಾದರಿ. ನನಗೂ ನೀವು ಮಾದರಿಯಾಗಿದ್ದೀರಿ. ನಿಮಗೆ ದೇವರು ಒಳ್ಳೆಯದು ಮಾಡಲಿ “ ಎಂದು ಹೇಳಿದ್ದಾರೆ.
ಇದೇ ವೇಳೆ ಝೈರಾ ವಿರುದ್ದ ಟೀಕೆ ಮಾಡುವ ಜನರಿಗೆ ಮನವಿ ಮಾಡಿರುವ ಆಮಿರ್ ಖಾನ್ ಅವರು, “ಆಕೆಯನ್ನು ಆಕೆಯ ಪಾಡಿಗೆ ಬಿಟ್ಟುಬಿಡಿ. ಆಕೆ ಇನ್ನು 16 ರ ಹರೆಯದ ಬಾಲಕಿಯೆಂಬುದನ್ನು ತಿಳಿದುಕೊಂಡು .ಆಕೆಗೆ ಗೌರವಯುತ ಬದುಕಿಗೆ ಅವಕಾಶ ನೀಡಿ’’ ಎಂದು ಹೇಳಿದ್ದಾರೆ.
.
— Aamir Khan (@aamir_khan) January 17, 2017







