ಮೊಂತಿ ಪನೇಸರ್ ಆಸ್ಟ್ರೇಲಿಯಕ್ಕೆ ಸ್ಪಿನ್ ಬೌಲಿಂಗ್ ಸಲಹೆಗಾರ

ಮೆಲ್ಬೋರ್ನ್, ಜ.17: ಮುಂದಿನ ತಿಂಗಳು ಭಾರತಕ್ಕೆ ಪ್ರವಾಸ ಕೈಗೊಳ್ಳಿರುವ ಆಸ್ಟ್ರೇಲಿಯ ಕ್ರಿಕೆಟ್ ತಂಡಕ್ಕೆ ಭಾರತೀಯ ಸಂಜಾತ ಇಂಗ್ಲೆಂಡ್‌ನ ಸ್ಪಿನ್ ಬೌಲರ್ ಮೊಂಟಿ ಪನೇಸರ್ ಸ್ಪಿನ್ ಬೌಲಿಂಗ್ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ.
ಪ್ರಸ್ತುತ ಕ್ಲಬ್ ಕ್ರಿಕೆಟರ್ ಆಗಿ ಸಿಡ್ನಿಯಲ್ಲಿರುವ 34ರ ಹರೆಯದ ಮೊಂಟಿ ಪನೇಸರ್ 2012-13ರಲ್ಲಿ ಭಾರತಕ್ಕೆ ಪ್ರವಾಸ ಕೈಗೊಂಡಿದ್ದ ವೇಳೆ ಮೂರು ಟೆಸ್ಟ್‌ಗಳಲ್ಲಿ 17 ವಿಕೆಟ್ ಉಡಾಯಿಸಿ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್‌ಗೆ ಸ್ಮರಣೀಯವನ್ನಾಗಿಸಿದ್ದರು. ಅವರು ಭಾರತ ನೆಲದಲ್ಲಿ ದಾಖಲಿಸಿದ ಅಪೂರ್ವ ದಾಖಲೆಯನ್ನು ಪರಿಗಣಿಸಿ ಅವರನ್ನು ಆಸ್ಟ್ರೇಲಿಯ ತಂಡದ ತಯಾರಿಗೆ ಸ್ಪಿನ್ ಬೌಲಿಂಗ್ ತಜ್ಞರಾಗಿ ನೇಮಕ ಮಾಡಲಾಗಿದೆ.
ಆಸ್ಟ್ರೇಲಿಯದ ಎಡಗೈ ಸ್ಪಿನ್ನರ್ ಸ್ಟೀವ್ ಓ’ ಕೇಫೆ ಮತ್ತು ಆರಂಭಿಕ ದಾಂಡಿಗ ಮ್ಯಾಥ್ಯೂ ರೆನ್‌ಶಾವ್ ಅವರಿಗೆ ಪನೇಸರ್‌ಎಕ್ಸಲೆನ್ಸ್ ಸೆಂಟರ್‌ನಲ್ಲಿ ಅಭ್ಯಾಸಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯದ ಮ್ಯಾನೇಜರ್ ಪ್ಯಾಟ್ ಹೊವಾರ್ಡ್ ಅವರು ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯ ತಂಡವನ್ನು ಅಣಿಗೊಳಿಸಲು ಮೊಂಟಿ ಪನೇಸರ್ ಸ್ಪಿನ್ ಬೌಲಿಂಗ್ ಸಲಹೆಗಾರರಾಗಿ ನೇಮಕ ಮಾಡಿದ್ದಾರೆ. ಕಳೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜ ಅವರು 54 ವಿಕೆಟ್‌ಗಳನ್ನು ಹಂಚಿಕೊಂಡಿದ್ದರು. ಇವರ ಯಶಸ್ಸನ್ನು ಗಮನದಲ್ಲಿಟ್ಟುಕೊಂಡು ಇವರ ದಾಳಿಯನ್ನು ಎದುರಿಸುವ ಉದ್ದೇಶಕ್ಕಾಗಿ ಆಸ್ಟ್ರೇಲಿಯ ತಂಡ ಪನೇಸರ್ ನೆರವು ಪಡೆಯಲಿದೆ.
ಆಸ್ಟ್ರೇಲಿಯ 2004ರಿಂದ ಭಾರತದಲ್ಲಿ ಒಂದು ಟೆಸ್ಟ್‌ನ್ನು ಜಯಿಸಿಲ್ಲ. 2011ರಲ್ಲಿ ಏಷ್ಯಾ ಖಂಡದಲ್ಲಿ ಕೊನೆಯ ಬಾರಿ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಜಯಿಸಿತ್ತು. ಆಸ್ಟ್ರೇಲಿಯ ಉಪಖಂಡದಲ್ಲಿ ಸತತ 9 ಟೆಸ್ಟ್ ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು.
,,,,,,,,,,,,





