ಬಿಎಸ್‌ವೈ- ಈಶ್ವರಪ್ಪ ಬೆಂಬಲಿಗರ ಬಿಗ್ ಫೈಟ್ : ರಣರಂಗವಾದ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿ
ಕಮಲ ಕಲಹ ತಾರಕಕ್ಕೆ

ಶಿವಮೊಗ್ಗ, ಜ. 17: ತವರೂರು ಶಿವಮೊಗ್ಗ ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ- ಕೆ.ಎಸ್. ಈಶ್ವರಪ್ಪಬೆಂಬಲಿಗರ ತಿಕ್ಕಾಟ ತೀವ್ರಗೊಂಡಿದ್ದು, ಸೋಮವಾರ ಪತ್ರಿಕಾಗೋಷ್ಠಿಯ ಮೂಲಕ ಎರಡು ಬಣದ ಮುಖಂಡರು ವಾಕ್ಸಮರ ನಡೆಸಿದ ಬೆನ್ನಲ್ಲೇ ಮಂಗಳವಾರ ಎರಡೂ ಬಣದ ಕಾರ್ಯಕರ್ತರು ಪಕ್ಷದ ಜಿಲ್ಲಾ ಕಚೇರಿಯಲ್ಲಿ ಕೈ-ಕೈ ಮಿಲಾಯಿಸಿ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ.
ಘರ್ಷಣೆಯಿಂದ ಬಿಜೆಪಿ ಕಚೇರಿ ಮುಂಭಾಗದ ರಸ್ತೆಯಲ್ಲಿ ಕೆಲಸಮಯ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಸ್ಥಳದಲ್ಲಿದ್ದ ಪಕ್ಷದ ಕೆಲ ಮುಖಂಡರು ಎರಡು ಬಣದ ಉದ್ರಿಕ್ತ ಕಾರ್ಯಕರ್ತರನ್ನು ಸಮಾಧಾನಗೊಳಿಸಿದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಎರಡೂ ಬಣದ ಕಾರ್ಯಕರ್ತರನ್ನು ಸ್ಥಳದಿಂದ ಚದುರಿಸಿದ್ದಾರೆ. ಈ ಕುರಿತಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎರಡೂ ಬಣದವರು ಯಾವುದೇ ದೂರು ದಾಖಲಿಸಿಲ್ಲ ಎಂದು ತಿಳಿದು ಬಂದಿದೆ.
ಘಟನೆಯ ವಿವರ: ಸೋಮವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯ ವೇಳೆ ಅರ್ಧಕ್ಕೆ ಗೋಷ್ಠಿಯಿಂದ ಹೊರ ನಡೆದು ಅಶಿಸ್ತು ತೋರಿ ಪಕ್ಷದ ತತ್ವ-ಸಿದ್ದಾಂತ ಉಲ್ಲಂಘಿಸಿ ಜಿಲ್ಲಾಧ್ಯಕ್ಷರಿಗೆ ಅವಮಾನವಾಗುವಂತೆ ವರ್ತಿಸಿದ ಪಕ್ಷದ ಮುಖಂಡರಾದ ಗಿರೀಶ್ ಪಟೇಲ್, ಚೆನ್ನಬಸಪ್ಪ, ಎಸ್.ದತ್ತಾತ್ರಿ ಮತ್ತಿತರರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಆಗ್ರಹಿಸಿ ಬಿ.ಎಸ್. ಯಡಿಯೂರಪ್ಪಬೆಂಬಲಿಗರ ದೊಡ್ಡ ಗುಂಪು ಜಿಲ್ಲಾ ಬಿಜೆಪಿ ಕಚೇರಿಗೆ ಆಗಮಿಸಿ ಕಚೇರಿಯಲ್ಲಿದ್ದ ಜಿಲ್ಲಾಧ್ಯಕ್ಷ ರುದ್ರೇಗೌಡರಿಗೆ ಈ ಗುಂಪು ಮನವಿ ಪತ್ರ ಸಲ್ಲಿಸಿತು.
ಮತ್ತೊಂದೆಡೆ ಪತ್ರಿಕಾಗೋಷ್ಠಿಯಿಂದ ಹೊರ ನಡೆದಿದ್ದ ಚೆನ್ನಬಸಪ್ಪ ಅವರೂ ಗುಂಪು ಮನವಿ ಅರ್ಪಿಸುತ್ತಿದ್ದ ಸಂದರ್ಭದಲ್ಲಿ ಪಕ್ಷದ ಕಚೇರಿಯಲ್ಲಿಯೇ ಇದ್ದರು. ಈ ನಡುವೆ ಬಿಎಸ್‌ವೈ ಬೆಂಬಲಿಗರು ಮನವಿ ಸಲ್ಲಿಸಿದ ವಿಷಯ ತಿಳಿದ ಕೆ.ಎಸ್. ಈಶ್ವರಪ್ಪಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ಕಚೇರಿಯ ಬಳಿ ಜಮಾಯಿಸಲಾರಂಭಿಸಿದರು.
ಗದ್ದಲ: ಬಿಎಸ್‌ವೈ ಪರವಾಗಿ ಅವರ ಬೆಂಬಲಿಗರು ಕಚೇರಿಯ ಹೊರಭಾಗದಲ್ಲಿ ಘೋಷಣೆ ಕೂಗುತ್ತಿದ್ದರೆ, ಕಚೇರಿಯ ಒಳಗಿದ್ದ ಈಶ್ವರಪ್ಪ ಅವರ ಕೆಲ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿ, ಘೋಷಣೆ ಕೂಗುವುದನ್ನು ನಿಲ್ಲಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಎರಡೂ ಗುಂಪುಗಳ ಮಧ್ಯೆ ವಾತಿನ ಚಕಮಕಿ ನಡೆಯಲಾರಂಭಿಸಿತು.
ಎರಡೂ ಗುಂಪಿನ ನಡುವೆ ಮಾತಿನ ಚಕಮಕಿ ತೀವ್ರಗೊಂಡು, ಅವ್ಯಾಚ್ಯ ಶಬ್ದಗಳ ವಿನಿಮಯವಾದವು. ಈ ವೇಳೆ ಎರಡು ಬಣಗಳ ಒಂದಿಬ್ಬರು ಕಾರ್ಯಕರ್ತರು ಕೈ-ಕೈ ವಿುಲಾಯಿಸಿ ಕೊಂಡರು.
ತಕ್ಷಣವೇ ಜಿಲ್ಲಾಧ್ಯಕ್ಷ ಎಸ್. ರುದ್ರೇಗೌಡರು ಉದ್ರಿಕ್ತರ ಸಮಾಧಾನಗೊಳಿಸಲು ಯತ್ನಿಸಿದ್ದು, ಈಶ್ವರಪ್ಪ ಅವರ ಬೆಂಬಲಿಗರಾದ ಚೆನ್ನಬಸಪ್ಪಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡರನ್ನು ತರಾಟೆಗೆ ತೆಗದು ಕೊಂಡ ಕಾರಣ ತೀವ್ರ ವಾಕ್ಸಮರ ನಡೆದಿದೆ.
ಬಣ ರಾಜಕಾರಣ ತೀವ್ರ....
ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯ ಕೆಲ ಮುಖಂಡರು ಬಿ.ಎಸ್. ಯಡಿಯೂರಪ್ಪ ಹಾಗೂ ಕೆ.ಎಸ್. ಈಶ್ವರಪ್ಪ ಪರ - ವಿರೋಧವಾಗಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಮತ್ತೊಂದೆಡೆ ಅವರಿಬ್ಬರ ತವರೂರು ಶಿವಮೊಗ್ಗದಲ್ಲಿ ಭಾರೀ ದೊಡ್ಡ ಮಟ್ಟದಲ್ಲಿ ಬಣ ರಾಜಕಾರಣ ನಡೆಯುತ್ತಿದೆ. ಬಿಎಸ್‌ವೈ ಹಾಗೂ ಈಶ್ವರಪ್ಪ ಬಣಗಳ ನಡುವೆ ವಾಕ್ಸಮರ, ಆರೋಪ-ಪ್ರತ್ಯಾರೋಪಗಳು ನಡೆಯುತ್ತಿದ್ದು, ಇದೀಗ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ. ಒಟ್ಟಾರೆ ಬಿಜೆಪಿ ಪಾಳೇಯದಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು, ಅನಧಿಕೃತವಾಗಿ ಪಕ್ಷದ ಮುಖಂಡರು-ಕಾರ್ಯಕರ್ತರು ಇಬ್ಭಾಗವಾಗಿದ್ದಾರೆ. ಮುಂದೆ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುವುದು ಕಾದು ನೋಡಬೇಕಾಗಿದೆ.







