ವೇಮುಲಾ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಮೇಣದ ಬತ್ತಿ ಹಿಡಿದು ಪ್ರತಿಭಟನೆ

ಉಡುಪಿ, ಜ.17: ಹೈದರಾಬಾದಿನ ಕೇಂದ್ರಿಯ ವಿವಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲಾ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಉಡುಪಿಯ ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಮಂಗಳವಾರ ಉಡುಪಿಯ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಮೇಣದ ಬತ್ತಿಯನ್ನು ಹಿಡಿದು ಪ್ರತಿಭಟನೆ ನಡೆಸಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಚಿಂತಕ ಪ್ರೊ.ಕೆ.ಫಣಿರಾಜ್, ವೇಮುಲಾ ಸಾವು ವ್ಯವಸ್ಥೆ ನಡೆಸಿದ ಕೊಲೆ. ವಿಜ್ಞಾನಿಯಾಗಬೇಕೆಂದು ಆಸೆ ಹೊಂದಿದ್ದ ವೇಮುಲಾ, ಪ್ರಖರ ಅಂಬೇಡ್ಕರ್ ವಾದಿಯಾಗಿದ್ದರಲ್ಲದೆ ಅವರ ಚಿಂತನೆಯನ್ನು ಅಳವಡಿಸಿಕೊಂಡಿದ್ದರು. ಆರ್ಥಿಕ ದಬ್ಬಾಳಿಕೆ, ಜಾತಿ ಅಸಮಾನತೆ, ಭಯೋತ್ಪಾದನೆ ಆರೋಪ ಹೊರಿಸಿದ ವಿವಿಯ ಅಪ್ಪಾರಾವ್, ಸಚಿವ ಬಂಡಾರು ದತ್ತಾತ್ರೇಯ, ರಾಮಚಂದ್ರರಾವ್, ಸ್ಮತಿ ಇರಾನಿ ಹಾಗೂ ಎಬಿವಿಪಿ ಸಂಘಟನೆಗಳೇ ಇವರ ಸಾವಿಗೆ ನೇರ ಹೊಣೆ. ಇವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಜರಗಿಸಬೇಕು ಎಂದು ತಿಳಿಸಿದರು.
ದೇಶದ ದಲಿತ ದಮನಿತ ವಿದ್ಯಾರ್ಥಿಗಳು ರೋಹಿತ್ ಅವರ ಹಾಗೆ ಅಧಿಕಾರಸ್ಥರ ದಬ್ಬಾಳಿಕೆ ಬಲಿಯಾಗದಂತೆ ರಕ್ಷಿಸುವ ಸಂವಿಧಾನಿಕ ರೋಹಿತ ಕಾಯಿದೆಯನ್ನು ಕೂಡಲೇ ಜಾರಿಗೆ ತರಬೇಕೆಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಸುಂದರ್ ಮಾಸ್ಟರ್, ಸಂಚಾಲಕ ಶ್ಯಾಮರಾಜ್ ಬಿರ್ತಿ, ಸಹ ಸಂಚಾಲಕ ಹುಸೇನ್ ಕೋಡಿಬೆಂಗ್ರೆ, ಎಸ್. ಎಸ್.ಪ್ರಸಾದ್, ಪ್ರೊ.ಸಿರಿಲ್ ಮಥಾಯಸ್, ಯಾಸೀನ್ ಕೋಡಿಬೆಂಗ್ರೆ, ಸುಂದರ ಕಪ್ಪೆಟ್ಟು, ವಿಠಲ ತೊಟ್ಟಂ, ಶಂಕರ್‌ದಾಸ್ ಚೇಂಡ್ಕಳ, ದಿನಕರ ಬೆಂಗ್ರೆ ಮೊದಲಾದವರು ಉಪಸ್ಥಿತರಿದ್ದರು.







