1 ಕೋಟಿ ಮೊತ್ತದ ಹವಾಲಾ ಹಣ ಸಾಗಾಟ ಪತ್ತೆ

ಚಂಡೀಗಡ, ಜ.17: ನೋಟು ಅಮಾನ್ಯದ ಬಳಿಕ 1000 ಕೋಟಿಗೂ ಹೆಚ್ಚಿನ ಮೊತ್ತದ ಹವಾಲಾ ಹಣವನ್ನು ಬ್ಯಾಂಕಿಂಗ್ ವ್ಯವಹಾರದ ಮೂಲಕ ಸಾಗಿಸಲಾಗಿರುವುದನ್ನು ಹರ್ಯಾಣಾದ ಚರ್ಕಿ ದಾದ್ರಿ ಎಂಬಲ್ಲಿ ಪತ್ತೆಹಚ್ಚಿರುವುದಾಗಿ ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 18 ಫಲಾನುಭವಿಗಳಿಗೆ ಹಣ ಜಮೆ ಮಾಡಲು ಅನುಕೂಲ ಮಾಡಿಕೊಟ್ಟ ದಾಖಲೆ ನಿರ್ವಾಹಕನೋರ್ವನನ್ನು ಗುರುತಿಸಲಾಗಿದೆ. ವಿವಿಧ ಹವಾಲಾ ಜಾಲದವರು ಹಣ ಜಮೆ ಮಾಡಲು ಅನುಕೂಲವಾಗುವಂತೆ ಬೇನಾಮಿ ಖಾತೆಗಳನ್ನು ತೆರೆಯಲಾಗಿದೆ. ನಿರ್ಧಿಷ್ಟ ಶುಲ್ಕ ಪಡೆದು ಈ ಖಾತೆಯಲ್ಲಿ ಹಣ ಜಮೆ ಮಾಡಲಾಗಿದೆ ಎಂದು ಆದಾಯತೆರಿಗೆ ಇಲಾಖೆಯ ಮಹಾನಿರ್ದೇಶಕ ಮಧು ಮಹಾಜನ್ ತಿಳಿಸಿದ್ದಾರೆ. ಈ ಮಧ್ಯೆ ನೋಟು ಅಮಾನ್ಯ ನಿರ್ಧಾರದ ಬಳಿಕ ಇಲಾಖೆಯು ಪಂಜಾಬ್, ಚಂಡೀಗಡ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ ಮತ್ತು ಹರ್ಯಾಣಾದಲ್ಲಿ ಒಟ್ಟು 280 ಕೋಟಿ ರೂ. ಮೊತ್ತದ ಅಘೋಷಿತ ಸಂಪತ್ತನ್ನು ವಶಕ್ಕೆ ಪಡೆದಿದೆ ಎಂದವರು ತಿಳಿಸಿದ್ದಾರೆ.
Next Story





