ಜ.20ರ ಮೊದಲು ಸಿಬಿಐ ಮುಖ್ಯಸ್ಥರ ನೇಮಕ

ಹೊಸದಿಲ್ಲಿ, ಜ.17: ಸಿಬಿಐಗೆ ನೂತನ ಮುಖ್ಯಸ್ಥರನ್ನು ಆಯ್ಕೆ ಮಾಡುವ ವಿಷಯದಲ್ಲಿ ಇರುವ ಎಲ್ಲಾ ಅಡೆತಡೆಗಳನ್ನೂ ಅತೀ ಶೀಘ್ರದಲ್ಲಿ ನಿವಾರಿಸಲಾಗುವುದು ಮತ್ತು ಜ.20ರ ಮೊದಲು ಈ ಬಗ್ಗೆ ನಿರ್ಧಾರಕ್ಕೆ ಬರಲಾಗುವುದು ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಲಾಗಿದೆ.
ಸೋಮವಾರ ನಡೆದ ಪ್ರಧಾನಿ, ಭಾರತದ ಪ್ರಧಾನ ನ್ಯಾಯಾಧೀಶರು ಮತ್ತು ವಿಪಕ್ಷ ನಾಯಕರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ಸಿಬಿಐ ಮುಖ್ಯಸ್ಥರ ಕುರಿತು ಚರ್ಚೆ ನಡೆಯಿತು ಎಂದು ಕೇಂದ್ರವನ್ನು ಪ್ರತಿನಿಧಿಸಿದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಸುಪ್ರೀಂಕೋರ್ಟ್‌ನ ವಿಭಾಗೀಯ ಪೀಠಕ್ಕೆ ತಿಳಿಸಿದರು. ಈ ವಿಷಯದ ಕುರಿತು ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಜ.20ರ ವರೆಗೆ ಮುಂದೂಡಲಾಗುವುದು ಎಂದು ಕೋರ್ಟ್ ತಿಳಿಸಿದೆ. ಸಿಬಿಐ ಮುಖ್ಯಸ್ಥರ ನೇಮಕಾತಿ ವಿಷಯದಲ್ಲಿ ಹಿರಿಯ ಅಧಿಕಾರಿ ಆರ್.ಕೆ.ದತ್ತ ಅವರ ಹೆಸರನ್ನು ದುರುದ್ದೇಶಪೂರ್ವಕವಾಗಿ ಕೈ ಬಿಡಲಾಗಿದೆ ಎಂಬ ಆರೋಪವನ್ನು ಮುಕುಲ್ ರೋಹಟಗಿ ಅಲ್ಲಗಳೆದಿದ್ದು , ಈ ಹುದ್ದೆಗೆ ಇರುವ ನಿಗದಿತ ಮಾನದಂಡದ ಪ್ರಕಾರ ದತ್ತಾ ಅವರ ಸೇವಾವಧಿ ಕಡಿಮೆ ಇರುವ ಕಾರಣ ಅವರನ್ನು ಪರಿಗಣಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.





