ಛತ್ತೀಸ್‌ಗಡ: 5 ನಕ್ಸಲೀಯರ ಬಂಧನ
ರಾಯ್‌ಪುರ,ಜ.17: ಛತ್ತೀಸ್‌ಗಡದ ನಕ್ಸಲ್‌ಪೀಡಿತ ಕೊಂಡಗಾಂವ್ ಜಿಲ್ಲೆಯಲ್ಲಿ ಐವರು ಮಾವೋವಾದಿಗಳನ್ನು ಭದ್ರತಾಪಡೆಗಳು ಬಂದಿಸಿವೆ. ಮರ್ದಪಾಲ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ತೆರಳಿದ್ದ ಸಂದರ್ಭದಲ್ಲಿ ಭದ್ರತಾಪಡೆಗಳು ಇವರನ್ನು ಬಂಧಿಸಿರುವುದಾಗಿ ಕೊಂಡಾಗಾಂವ್‌ನ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ್ವರ್ ನಾಗ್ ತಿಳಿಸಿದ್ದಾರೆ.
ಜಿಲ್ಲಾ ಮೀಸಲು ದಳ (ಡಿಆರ್‌ಜಿ), ವಿಶೇಷ ಕಾರ್ಯಪಡೆ(ಎಸ್‌ಟಿಎಫ್), ಇಂಡೋ-ಟಿಬೆಟನ್ ಗಡಿ ಪೊಲೀಸ್ (ಐಟಿಬಿಪಿ) ಹಾಗೂ ಸ್ಥಳೀಯ ಪೊಲೀಸರನ್ನು ಒಳಗೊಂಡ ಜಂಟಿ ತಂಡ, ಹಂಡಪಾಲ್, ಚಿತ್ಪಾನಿ, ತುಮ್ಡಿವಾಲ್ ಹಾಗೂ ಕುಡೂರು ಗ್ರಾಮಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ, ಈ ಪ್ರದೇಶದಲ್ಲಿ ನಕ್ಸಲರ ಉಪಸ್ಥಿತಿಯ ಬಗ್ಗೆ ಮಾಹಿತಿ ದೊರೆತಿತ್ತೆಂದು ಮಹೇಶ್ವರ್ ನಾಗ್ ಹೇಳಿದ್ದಾರೆ. ಕೂಡಲೇ ಸ್ಥಳವನ್ನು ಸುತ್ತುವರಿದ ಭದ್ರತಾಪಡೆಗಳು ಐವರು ನಕ್ಸಲೀಯರನ್ನು ವಶಕ್ಕೆ ತೆಗೆದುಕೊಂಡಿವೆ. ಬಂಧಿತರನ್ನು ರಾಮ್‌ಧರ್ (28), ಜೈಸಿಂಗ್ ನಾಗ್(27), ನೀಲಾಧರ್ ಯಾದವ್ (21), ಸುಖ್‌ಮಾನ್ ಕಶ್ಯಪ್(26) ಸಾಹು ಕಶ್ಯಪ್ (25) ಎಂದು ಗುರುತಿಸಲಾಗಿದೆ. ಇವರೆಲ್ಲರೂ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಗೆ ಸೇರಿದವರೆಂದು ತಿಳಿದುಬಂದಿದೆ.
ಬಂಧಿತರು ನಕ್ಸಲ್ ನಾಯಕ ರಾಮಚಂದ್ರ ರೆಡ್ಡಿ ಯಾನೆ ರಾಜು ಸಹವರ್ತಿಗಳಾಗಿದ್ದು,ಕಳೆದ ವರ್ಷ ಹಂಡ್‌ಪಾಲ್ ಪ್ರದೇಶದ ಮೇಲೆ ಪೊಲೀಸ್ ತಂಡದ ಮೇಲೆ ನಡೆದ ದಾಳಿ ಸೇರಿದಂತೆ ವಿವಿಧ ಮಾವೋವಾದಿ ಬಂಡುಕೋರರ ಚಟುವಟಿಕೆಗಳಲ್ಲಿ ಶಾಮೀಲಾಗಿದ್ದಾರೆಂದು ಶಂಕಿಸಲಾಗಿದೆ.





