ಚಿನ್ನದ ಆಸೆಗೆ 70ರ ವೃದ್ಧೆಯ ಕೊಲೆ ಪ್ರಕರಣ : ಅಪರಾಧಿಗೆ ಜೀವಾವಧಿ ಶಿಕ್ಷೆ
ಮಂಗಳೂರು, ಜ. 17: ಚಿನ್ನಾಭರಣದ ಆಸೆಗಾಗಿ 70ರ ಹರೆಯದ ವೃದ್ಧೆಯೋರ್ವರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಗರದ ಒಂದನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರನ್ಯಾಯಾಲಯವು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕಣ್ಣೂರು ಪಟುವಮ್ ಗ್ರಾಮದ ಕುನ್ನೂಲು ನಿವಾಸಿ ರವೀಂದ್ರನ್ (64) ಶಿಕ್ಷೆಗೊಳಗಾದ ಅಪರಾಧಿ.
ರಾಯರೋಮ್ ಪಳ್ಳಕವಲಾ ನಿವಾಸಿ ಏಲಿಕುಟ್ಟಿ (70) ಕೊಲೆಯಾದ ವೃದ್ಧೆ. 2014ರ ಜ.14ರಂದು ಈ ಘಟನೆ ನಡೆದಿತ್ತು. ನಗರದ ಕೆ.ಎಸ್.ರಾವ್ ರಸ್ತೆಯಲ್ಲಿರುವ ವಸತಿ ಗೃಹದಲ್ಲಿ ಮಹಿಳೆಗೆ ಮತ್ತು ಬರಿಸುವ ಮಾತ್ರೆ ಕುಡಿಸಿ ಬಳಿಕ ಕೊಲೆ ಮಾಡಿ ಮಹಿಳೆಯ ಬಳಿಯಿಂದ 55ಗ್ರಾಂ ಚಿನ್ನಾಭರಣ ಸಹಿತ ಪರಾರಿಯಾಗಿದ್ದ.
ಅಪರಾಧಿ ರವೀಂದ್ರನ್ ವೃತ್ತಿಯಲ್ಲಿ ಪಳ್ಳಿಕವಲಾದಲ್ಲಿ ಬಸ್ ಕಂಡಕ್ಟರ್ ಆಗಿದ್ದು, ಬಸ್ಸಿನಲ್ಲಿ ಏಲಿಕುಟ್ಟಿಯ ಪರಿಚಯವಾಗಿತ್ತು. ಇದರಿಂದ ಇಬ್ಬರ ಮಧ್ಯೆ ಆತ್ಮೀಯತೆ ಬೆಳೆದಿತ್ತು. ಒಂದು ದಿನ ಏಲಿಕುಟ್ಟಿ ಅವರು ರವೀಂದ್ರನ್‌ರಲ್ಲಿ ಮಂಗಳೂರಿಗೂ ಒಟ್ಟಿಗೆ ಹೋಗುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದರು. ರವೀಂದ್ರನ್ ಹಿಂದೆ ಅಂಗಡಿ ಪ್ರಾರಂಭಿಸಲು ಸಹಕಾರಿ ಬ್ಯಾಂಕ್‌ವೊಂದರಿಂದ 75 ಸಾವಿರ ರೂ. ಸಾಲ ಪಡೆದಿದ್ದ. ಅದು ಬಡ್ಡಿ ಸೇರಿ 1.75 ಲಕ್ಷ ರೂ. ಆಗಿತ್ತು. ಆತನ ಮೇಲೆ ಕೋರ್ಟ್‌ನಲ್ಲಿ ಕೇಸು ಕೂಡಾ ದಾಖಲಾಗಿತ್ತು. ಹೇಗಾದರೂ ಸಾಲ ಮರುಪಾವತಿಸುವ ಇರಾದೆಯಿಂದ ರವೀಂದ್ರನ್ ಏಲಿಕುಟ್ಟಿ ಬಳಿ ಸಾಲ ಕೇಳಿದ್ದಾನೆ. ಆದರೆ ಆಕೆ ಸಾಲ ಕೊಡಲು ನಿರಾಕರಿಸಿದ್ದಾಳೆ. ಇದಾದ ಕೆಲವು ಸಮಯದ ನಂತರ ಏಲಿಕುಟ್ಟಿ 2014 ರ ಜ.14ರಂದು ಮಂಗಳೂರಿಗೆ ಚಿಕಿತ್ಸೆಗೆ ಹೋಗುವ ಬಗ್ಗೆ ಹೇಳಿದ್ದಾಳೆ. ಅದರಂತೆ ರವೀಂದ್ರನ್‌ನ್ನು ಕೂಡಾ ಮಂಗಳೂರಿಗೆ ಆಕೆಯ ಜತೆ ರೈಲಿನಲ್ಲಿ ಕರೆದುಕೊಂಡು ಬಂದಿದ್ದಾರೆ.
ಮಂಗಳೂರಿಗೆ ಬರುವ ಮುಂಚೆಯೇ ರವೀಂದ್ರನ್ ಆಕೆಯನ್ನು ಕೊಲೆ ಮಾಡಿ, ಅವಳ ಚಿನ್ನಾಭರಣ ದೋಚುವ ಯೋಜನೆ ರೂಪಿಸಿದ್ದ. ಇದಕ್ಕಾಗಿ ತಳಿಪರಂಬದಿಂದ ಬರುವಾಗಲೇ ನಿದ್ದೆ ಮಾತ್ರೆಗಳನ್ನು ಖರೀದಿಸಿದ್ದ. ಮಂಗಳೂರಿಗೆ ಬಂದ ಅವರಿಬ್ಬರು ಹೊಟೇಲ್‌ನಲ್ಲಿ ರೂಮ್ ಮಾಡಿದ್ದರು. ಸಾಯಂಕಾಲ 6:30ರ ವೇಳೆಗೆ ರವೀಂದ್ರನ್ ಹೊಟೇಲ್‌ನ ಹೊರಗೆ ಬಂದು ಇಬ್ಬರಿಗೂ ಮದ್ಯ ಖರೀದಿಸಿ, ಏಲಿಕುಟ್ಟಿಗೆ ನೀಡುವ ಮದ್ಯದಲ್ಲಿ ನಿದ್ದೆ ಮಾತ್ರೆ ಬೆರೆಸಿ ನೀಡಿದ್ದಾನೆ. ಬಳಿಕ ಬಿರಿಯಾನಿ ಊಟ ಮಾಡಿ ಇಬ್ಬರೂ ಪ್ರತ್ಯೇಕವಾಗಿ ಮಲಗಿದ್ದಾರೆ. ಬೆಳಗೆದ್ದು ನೋಡುವಾಗ ಏಲಿಕುಟ್ಟಿ ಕ್ಷೀಣವಾಗಿ ಉಸಿರಾಡುತಿತಿದ್ದು, ಈ ಸಂದರ್ಭ ರವೀಂದ್ರನ್ ತಲೆದಿಂಬಿನಿಂದ ಮಹಿಳೆಯನ್ನು ಉಸಿರುಗಟ್ಟಿಸಿ ಸಾಯಿಸಿ, ಆಕೆ ಧರಿಸಿದ ಚಿನ್ನದ ಸರ, ಚಿನ್ನದ ಬಳೆಗಳು, ಉಂಗುರ, ಕಿವಿಯೋಲೆಗಳನ್ನು ದೋಚಿ ಊರಿಗೆ ಪರಾರಿಯಾಗಿದ್ದ. ಬಳಿಕ ಊರಿಗೆ ಹೋಗಿ ಚಿನ್ನದ ಸರವನ್ನು ಅಡವಿಟ್ಟು 55 ಸಾವಿರ ರೂ. ಪಡೆದುಕೊಂಡಿದ್ದ.
ಪ್ರಕರಣದ ನಡೆದ 3 ದಿನದ ಬಳಿಕ ಜ.17ರಂದು ಕೋಣೆಯ ಬಾಗಿಲು ಬಂದ್ ಇರುವ ಬಗ್ಗೆ ಸಂಶಯಗೊಂಡ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಬಂದು ಬಾಗಿಲು ತೆರೆದಾಗ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ ಪೊಲೀಸರು ಜ.23ರಂದು ಆರೋಪಿಯನ್ನು ತಳಿಪರಂಬದಲ್ಲಿ ಬಂಧಿಸಿದ್ದರು. ಆಗಿನ ಬಂದರು ಇನ್‌ಸ್ಪೆಕ್ಟರ್ ಚೆಲುವರಾಜ್ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ 19 ಸಾಕ್ಷಿದಾರರ ವಿಚಾರಣೆ ನಡೆಸಿದ್ದು, ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ಸೇರಿದಂತೆ 5 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶ ಸಿ.ಎಂ. ಜೋಷಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ರಾಜು ಬನ್ನಾಡಿ ವಾದಿಸಿದ್ದಾರೆ.







