ಜಯಾ ಸೋದರ ಪುತ್ರಿ ರಾಜಕೀಯಕ್ಕೆ?
ಪಕ್ಷ ನನ್ನನ್ನು ಬಯಸುತ್ತಿದೆ... ಶಶಿಕಲಾರನ್ನಲ್ಲ: ದೀಪಾ ಜೆ.
ಚೆನ್ನೈ,ಜ.17: ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾರ ಅವರ ಸಹೋದರನ ಪುತ್ರಿ ದೀಪಾ ಜಯಕುಮಾರ್ ರಾಜಕೀಯದ ಅಖಾಡಕ್ಕಿಳಿಯುವ ಸುಳಿವು ನೀಡಿದ್ದು, ಆಡಳಿತಾರೂಢ ಎಡಿಎಂಕೆ ಪಕ್ಷದ ಬಹುತೇಕ ಮಂದಿ, ತನ್ನ ನಾಯಕತ್ವವನ್ನು ಬಯಸುತ್ತಿದ್ದಾರೆಯೇ ಹೊರತು, ಶಶಿಕಲಾರನ್ನಲ್ಲವೆಂದು ಹೇಳಿದ್ದಾರೆ. ಫೆಬ್ರವರಿ 24ರಂದು ಜಯಲಲಿತಾ ಅವರ ಜನ್ಮದಿನಾಚರಣೆಯಂದು ತನ್ನ ಮುಂದಿನ ರಾಜಕೀಯ ನಡೆಯನ್ನು ಪ್ರಕಟಿಸುವುದಾಗಿ ಅವರು ತಿಳಿಸಿದ್ದಾರೆ.
ಎನ್‌ಡಿಟಿವಿ ಸುದ್ದಿವಾಹಿನಿಗೆ ಮಂಗಳ ವಾರ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, ತನ್ನ ಚಿಕ್ಕಮ್ಮನ ಹೆಜ್ಜೆಗುರುತುಗಳನ್ನು ತಾನು ಅನುಸರಿಸಲು ಬಯಸುವುದಾಗಿ ಹೇಳಿದರು. ತಮಿಳುನಾಡು ವಿಧಾನಸಭೆಗೆ ಚೆನ್ನೈನಲ್ಲಿರುವ ಆರ್.ಕೆ.ನಗರ್ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆಯನ್ನು 42 ವರ್ಷ ವಯಸ್ಸಿನ ದೀಪಾ ಜಯಕುಮಾರ್ ವ್ಯಕ್ತಪಡಿಸಿದರು.
ತಮಗೆ ಎಡಿಎಂಕೆ ಪಕ್ಷದ ಬೆಂಬಲ ವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ಕಾರ್ಯಕರ್ತರು ತಾನು ಅವರ ನಾಯಕಿಯಾಗಬೇಕೆಂದು ಹಂಬಲಿಸು ತ್ತಿದ್ದಾರೆಂದು ಹೇಳಿದರು.
ಜಯಲಲಿತಾ ಅವರ ದೀರ್ಘಕಾಲದ ಗೆಳತಿಯಾಗಿದ್ದ ಶಶಿಕಲಾ, ಜನವರಿ 2ರಂದು ಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಅವರಿಗೆ ಮುಖ್ಯಮಂತ್ರಿ ಓ. ಪನ್ನೀರ್‌ಸೆಲ್ವಂ ಸೇರಿದಂತೆ ಉನ್ನತ ನಾಯಕರ ಬೆಂಬಲವಿದೆ. ಆದರೆ ಜಯಲಲಿತಾರನ್ನೇ ಬಹುಮಟ್ಟಿಗೆ ಹೋಲುವ ಅವರ ಸೋದರ ಪುತ್ರಿ ದೀಪಾ ನಿಜವಾದ ಉತ್ತರಾಧಿಕಾರಿಯೆಂದು ಪಕ್ಷದ ಕೆಲವು ಬಣಗಳ ವಾದವಾಗಿದೆ.
ಎಡಿಎಂಕೆಗೆ ಸೇರ್ಪಡೆಗೊಂಡು ಶಶಿಕಲಾ ಅವರಿಗೆ ಬಹಿರಂಗವಾಗಿ ಸವಾಲೊಡ್ಡುವಿರಾ ಅಥವಾ ಸ್ವಂತ ಪಕ್ಷವನ್ನು ಕಟ್ಟುವಿರಾ ಎಂಬ ಪ್ರಶ್ನೆಗೆ ದೀಪಾ ಅವರು, ಪಕ್ಷದ ಕಾರ್ಯಕರ್ತರು ಹಾಗೂ ಜನರ ಜೊತೆ ಸಮಾಲೋಚಿಸಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.
ಕಳೆದ ವರ್ಷ ಅಪೊಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತನ್ನ ಚಿಕ್ಕಮ್ಮ ಜಯಲಲಿತಾ ರನ್ನು ಭೇಟಿಯಾಗಲು ಅವಕಾಶ ನೀಡಲಿಲ್ಲ ವೆಂದು ದೂರುವುದರೊಂದಿಗೆ ದೀಪಾ ಅವರು ಸಾರ್ವಜನಿಕರ ಗಮನಸೆಳೆದಿದ್ದರು. ಡಿಸೆಂಬರ್‌ನಲ್ಲಿ ಜಯಲಲಿತಾ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಕ್ಕೂ ಶಶಿಕಲಾ ಮತ್ತವರ ಬೆಂಬಲಿಗರು ಅವಕಾಶ ನೀಡಲಿಲ್ಲವೆಂದು ಆಕೆ ಆರೋಪಿಸಿದ್ದರು.





