ನಿರೀಕ್ಷಿತ ಮಟ್ಟ ತಲುಪದ ಕಾರ್ಯ ನಿರ್ವಹಣೆ : ಇಬ್ಬರು ಐಪಿಎಸ್ ಅಧಿಕಾರಿಗಳ ಕಡ್ಡಾಯ ನಿವೃತ್ತಿ

ಹೊಸದಿಲ್ಲಿ, ಜ.17: ಅಖಿಲ ಭಾರತ ಸೇವಾ ನಿಯಮದಡಿ, ಓರ್ವ ಸರಕಾರಿ ಸಿಬ್ಬಂದಿಯ 15 ಮತ್ತು 25 ವರ್ಷದ ಸೇವಾವಧಿಯ ಬಳಿಕ ನಡೆಸಲಾಗುವ ಕಾರ್ಯ ನಿರ್ವಹಣೆಯ ಸಾಮರ್ಥ್ಯ ಅವಲೋಕನದ ಬಳಿಕ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ಕಡ್ಡಾಯ ನಿವೃತ್ತಿಗೊಳಿಸಲಾಗಿದ್ದು ಇದು ಕಾರ್ಯ ನಿರ್ವಹಿಸದ ನೌಕರವರ್ಗದವರಿಗೆ ಸರಕಾರ ನೀಡಿದ ಅಪರೂಪದ, ನಿಷ್ಠುರ ಸಂದೇಶ ಎಂದು ಭಾವಿಸಲಾಗಿದೆ.
1992ರ ಬ್ಯಾಚ್ ಛತ್ತೀಸ್‌ಗಡ ಕೇಡರ್(ಪದವೃಂದ)ನ ರಾಜ್‌ಕುಮಾರ್ ದೇವಾಂಗನ್ ಮತ್ತು 1998ರ ಬ್ಯಾಚ್ ಎಜಿಎಂಯು ಕೇಡರ್‌ನ ಮಾಯಾಂಕ್ ಶೀಲ್ ಚೌಹಾಣ್ ಅವರೇ ಕಡ್ಡಾಯ ನಿವೃತ್ತಿ ಪಡೆದ ಅಧಿಕಾರಿಗಳು. ಇವರ ಸೇವಾ ದಾಖಲೆಯ ಪ್ರಕಾರ ಹಾಗೂ ಹಿರಿಯ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಈ ಇಬ್ಬರು ಅಧಿಕಾರಿಗಳ ಕಾರ್ಯ ನಿರ್ವಹಣೆ ತೀರಾ ಕೆಳಮಟ್ಟದಲ್ಲಿತ್ತು.
ಈ ಇಬ್ಬರು ಅಧಿಕಾರಿಗಳನ್ನು ‘ಸಾರ್ವಜನಿಕ ಹಿತಾಸಕ್ತಿಯ’ ನೆಲೆಯಲ್ಲಿ ಕಡ್ಡಾಯ ನಿವೃತ್ತಿಗೊಳಿಸಬೇಕೆಂದು ಸಂಬಂಧಿತ ರಾಜ್ಯದ ಕೇಡರ್‌ಳು ನೀಡಿದ ಶಿಫಾರಸ್ಸಿಗೆ ಕೇಂದ್ರ ಗೃಹ ಸಚಿವಾಲಯವು ಅನುಮೋದನೆ ಸೂಚಿಸಿದೆ.
ಈ ಇಬ್ಬರು ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ ಮತ್ತು ನಿಯಮದ ಪ್ರಕಾರ ಮೂರು ತಿಂಗಳ ಸಂಬಳ ನೀಡಲಾಗುವುದು ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಇದೊಂದು ಅಪರೂಪದ ಕ್ರಮವಾಗಿದೆ. ಇದಕ್ಕೂ ಮೊದಲು, ಸುಮಾರು 15 ವರ್ಷದ ಹಿಂದೆ ಮಹಾರಾಷ್ಟ್ರ ಕೇಡರ್‌ನ ಅಧಿಕಾರಿಯೋರ್ವರನ್ನು ಕಡ್ಡಾಯ ನಿವೃತ್ತಿಗೊಳಿಸಲಾಗಿತ್ತು. ಇದೇ ಕಾರಣದಿಂದ ಇತ್ತೀಚೆಗೆ ಇಬ್ಬರು ಐಎಎಸ್ ಅಧಿಕಾರಿಗಳನ್ನೂ ಕಡ್ಡಾಯ ನಿವೃತ್ತಿಗೊಳಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.







