ಎಪಿಎಂಸಿ ಚುನಾವಣೆಯಲ್ಲಿ ವಿಠಲ ಸಾಲಿಯಾನ್ ಗೆಲುವು : ಬಿಜೆಪಿಯಿಂದ ವಿಜಯೋತ್ಸವ

ಕೊಣಾಜೆ ,ಜ.17 : ಎಪಿಎಂಸಿ ಚುನಾವಣೆಯಲ್ಲಿ ಪುದು ಕ್ಷೇತ್ರದ ಅಭ್ಯರ್ಥಿ ಬಿಜೆಪಿ ಬೆಂಬಲಿತ ವಿಠಲ ಸಾಲಿಯಾನ್ ಅವರು ಜಯಭೇರಿ ಸಾಧಿಸಿದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ತೌಡುಗೋಳಿಯಿಂದ ಮುಡಿಪುವರೆಗೆ ವಿಜಯೋತ್ಸವ ಮೆರವಣಿಗೆಯು ನಡೆಯಿತು.
ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್ ಅವರ ನೇತೃತ್ವದಲ್ಲಿ ನಡೆದ ವಿಜಯೋತ್ಸವ ಮೆರವಣಿಗೆಯು ತೌಡುಗೊಳಿ ಕ್ರಾಸ್ ನಿಂದ ಹೊರಟು, ಮೊಂಟೆಪದವು, ಮೋಂಟುಗೊಳಿ, ಕೈರಂಗಳ ಹಾಗೂ ಹೂಹಕುವ ಕಲ್ಲು ಮಾರ್ಗವಾಗಿ ಮುಡಿಪುವರೆಗೆ ನಡೆಯಿತು.
ಮುಡಿಪುವಿನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಂತೋಷ್ ಕುಮಾರ್ ಬೋಳಿಯಾರ್ ಅವರು, ಮತದಾರ ಬಂದುಗಳು ಯಾವುದೇ ಜಾತಿ ಮತ ಭೇದಭಾವ ಮಾಡದೆ ಪ್ರಾಮಾಣಿಕವಾಗಿ ನಮ್ಮ ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿಠಲ ಸಾಲಿಯಾನ್ ಅವರನ್ನು ಆಯ್ಕೆ ಮಾಡಿದ್ದಾರೆ. ಇದರಲ್ಲಿ ಬಿಜೆಪಿ ಕಾರ್ಯಕರ್ತರ ನಿರಂತರ ಪರಿಶ್ರಮ. ಕೇಂದ್ರದಲ್ಲಿ ನರೇಂದ್ರ ಮೋದಿಯವರ ಅಭಿವೃದ್ದಿ ಸಾಧನೆಗಳೇ ಕಾರಣವಾಗಿದೆ ಎಂದು ಹೇಳಿದರು.
ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ವಿಠಲ ಸಾಲಿಯಾನ್ ಅವರು, ಎಪಿಎಂಸಿಯಲ್ಲಿ ಸಿಗುವ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿಯಿಂದ ಮತದಾರ ಬಾಂಧವರು ನನಗೆ ಕಲ್ಪಿಸಿಕೊಟ್ಟಿದ್ದು, ಈ ಕಾರ್ಯವನ್ನು ನಾನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಮೇರೆಮಜಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಕರ್ಕೇರ, ಮುಖಂಡರಾದ ಡಾ.ಮುನೀರ್ ಬಾವ ಹಾಜಿ, ಮೋರ್ಲ ವಿಶ್ವನಾಥ ಶಟ್ಟಿ, ಜಗದೀಶ್ ಆಳ್ವ ಕುವೆತ್ತಬೈಲ್, ಮುನೀರ್ ಮಾಸ್ಟರ್, ನಂದರಾಜ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಮಹೇಶ್ ಚೌಟ, ಮನೋಜ್ ಆಚಾರ್ಯ, ಗೋಪಾಲ ಅಶ್ವತ್ಥಾಡಿ, ನವೀನ್ ಪಾದಲ್ಪಾಡಿ, ಮಹಮ್ಮದ್ ಆಸ್ಗರ್, ಉದಯ್ ಬಲೆತ್ತೋಡು, ಪ್ರೇಮಾನಂದ ರೈ, ಸುಲೈಮಾನ್, ನವೀನ್ ಮೊದಲಾದವರು ಉಪಸ್ಥಿತರಿದ್ದರು.







