ಕಿವೀಸ್ ವಿರುದ್ಧ ಟೆಸ್ಟ್ ಸರಣಿ: ಎಬಿಡಿ ಅಲಭ್ಯ

ಜೋಹಾನ್ಸ್‌ಬರ್ಗ್, ಜ.17: ಮಾರ್ಚ್‌ನಲ್ಲಿ ನಡೆಯಲಿರುವ ನ್ಯೂಝಿಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ತಾನು ಲಭ್ಯವಿರುವುದಿಲ್ಲ. ಆದರೆ, ಟೆಸ್ಟ್ ಕ್ರಿಕೆಟ್‌ನಿಂದ ಸದ್ಯಕ್ಕೆ ನಿವೃತ್ತಿಯಾಗುವುದಿಲ್ಲ ಎಂದು ದಕ್ಷಿಣ ಆಫ್ರಿಕದ ಬ್ಯಾಟಿಂಗ್ ಸ್ಟಾರ್ ಎಬಿ ಡಿವಿಲಿಯರ್ಸ್ ಒತ್ತಿ ಹೇಳಿದ್ದಾರೆ.
ಇಂಗ್ಲೆಂಡ್‌ನಲ್ಲಿ 2019ರಲ್ಲಿ ನಡೆಯಲಿರುವ ಕ್ರಿಕೆಟ್ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕವನ್ನು ನಾಯಕನಾಗಿ ಮುನ್ನಡೆಸುವುದು ತನ್ನ ವೃತ್ತಿಜೀವನದ ಮುಖ್ಯ ಗುರಿಯಾಗಿದೆ ಎಂದು ಮುಂದಿನ ಸುತ್ತಿನಲ್ಲಿ 33ರ ಪ್ರಾಯಕ್ಕೆ ಕಾಲಿಡಲಿರುವ ಡಿವಿಲಿಯರ್ಸ್ ಹೇಳಿದ್ದಾರೆ.
‘‘ನಾವು ಈತನಕ ವಿಶ್ವಕಪ್ ಗೆದ್ದುಕೊಂಡಿಲ್ಲ. ನನಗೆ ಇನ್ನು ಮುಂದೆ 2019ರ ವಿಶ್ವಕಪ್ ಅತ್ಯಂತ ಪ್ರಮುಖವಾಗಿದೆ. ನಾನು ಈಬಾರಿ ಟ್ರೋಫಿಯನ್ನು ಗೆದ್ದೇ ಗೆಲ್ಲುತ್ತೇವೆ. ನಾನು ಎಲ್ಲಮಾದರಿಯ ಕ್ರಿಕೆಟ್‌ನಲ್ಲಿ ಆಡಿದರೆ, ಮಾನಸಿಕ ಹಾಗೂ ದೈಹಿಕವಾಗಿ ಉತ್ತಮವಾಗಿರಲು ಸಾಧ್ಯವಿಲ್ಲ’’ ಎಂದು ದಕ್ಷಿಣ ಆಫ್ರಿಕದ ಏಕದಿನ ತಂಡದ ನಾಯಕ ಡಿವಿಲಿಯರ್ಸ್ ಹೇಳಿದ್ದಾರೆ.
ನ್ಯೂಝಿಲೆಂಡ್ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ ಐದು ಪಂದ್ಯಗಳ ಏಕದಿನ ಸರಣಿಗೆ ಲಭ್ಯವಿರುವೆ.ಆದರೆ, ಮಾ.8 ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್‌ಗೆ ಮೊದಲು ಸ್ವದೇಶಕ್ಕೆ ವಾಪಸಾಗುವೆ ಎಂದು ಡಿವಿಲಿಯರ್ಸ್ ತಿಳಿಸಿದರು.
ಮೊಣಕಾಲು ನೋವಿನಿಂದ ಚೇತರಿಸಿಕೊಳ್ಳುತ್ತಿರುವ ಡಿವಿಲಿಯರ್ಸ್ ಕಳೆದ ವರ್ಷದ ಜುಲೈನಿಂದ ಸಕ್ರಿಯ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ.
ನಾನು ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದು, ಶ್ರೀಲಂಕಾ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡುವ ಮೊದಲು ಜು.25 ರಂದು ಕೇಪ್‌ಟೌನ್‌ನಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಮೂರನೆ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡುವೆನು ಎಂದು ಡಿವಿಲಿಯರ್ಸ್ ಹೇಳಿದ್ದಾರೆ.







