ಸ್ವಾಮಿ ವಿವೇಕಾನಂದರ ಉದ್ಯಾನವನ ಉದ್ಘಾಟನೆ

ಮಂಗಳೂರು, ಜ.17 : ನಗರದ ಬಿಜೈ ಚರ್ಚ್ ಬಳಿ ನಿರ್ಮಿಸಲಾದ ಸ್ವಾಮಿ ವಿವೇಕಾನಂದರ ಉದ್ಯಾನವನವನ್ನು ಶಾಸಕ ಜೆ.ಆರ್.ಲೋಬೊ ಮಂಗಳವಾರ ಉದ್ಘಾಟಿಸಿದರು. ಈ ಸಂದರ್ಭ ವಿವೇಕಾನಂದರ ಪ್ರತಿಮೆಯನ್ನು ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಾಜಿ ಅನಾವರಣಗೊಳಿಸಿದರು.
ಬಳಿಕ ಬಿಜೈ ಚರ್ಚ್ ಸಭಾಂಗಣದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಾಜಿ, ತನ್ನ ನಡೆನುಡಿಗಳಿಂದ ಪ್ರತಿಯೊಬ್ಬರಿಗೂ ಸ್ಪೂರ್ತಿ ನೀಡಿದ ತಪಸ್ವಿಯ ಹೆಸರಿನಲ್ಲಿ ಉದ್ಯಾನವನ ನಿರ್ಮಿಸಿರುವುದು ಶ್ಲಾಘನೀಯ ಎಂದರು.
ಬಿಜೈ ಚರ್ಚ್‌ನ ಧರ್ಮಗುರು ರೆ. ಫಾ. ವಿಲ್ಸನ್ ಎಲ್. ವೈಟಸ್ ಮಾತನಾಡಿ, ತ್ಯಾಜ್ಯಗಳಿಂದಲೇ ತುಂಬಿದ್ದ ಜಾಗವನ್ನು ಸುಂದರ ಉದ್ಯಾನವನವನ್ನಾಗಿ ಮಾಡುವಲ್ಲಿ ಭಂಡಾರಿ ಬಿಲ್ಡರ್ಸ್‌ನ ಅಧ್ಯಕ್ಷ ಲಕ್ಷ್ಮೆಶ ಭಂಡಾರಿಯ ಕೊಡುಗೆ ಅಪಾರ ಎಂದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಉದ್ಯಾನವನದ ಪ್ರಾಯೋಜಕ ಭಂಡಾರಿ ಬಿಲ್ಡರ್ಸ್‌ನ ಅಧ್ಯಕ್ಷ ಲಕ್ಷ್ಮೆಶ ಭಂಡಾರಿ, ಮುಡಾ ಅಧ್ಯಕ್ಷ ಸುರೇಶ್ ಬಲ್ಲಾಳ್, ಪಾಲಿಕೆಯ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಲ್ಯಾನ್ಸಿಲಾಟ್ ಪಿಂಟೊ, ಎಸ್.ಅಪ್ಪಿ, ಮಾಜಿ ಮೇಯರ್ ಮಹಾಬಲ ಮಾರ್ಲ, ಪಾಲಿಕೆ ಸದಸ್ಯರಾದ ಕೇಶವ ಮರೋಳಿ, ಎ.ಸಿ.ವಿನಯರಾಜ್, ರಜನೀಶ್, ಅಖಿಲಾ ಆಳ್ವ, ಮುಹಮ್ಮದ್, ಲತೀಫ್, ಶಿರ್ಡಿ ಸಾಯಿಬಾಬಾ ಮಂದಿರದ ಟ್ರಸ್ಟಿ ವಿಶ್ವಾಸ್ ಕುಮಾರ್ ದಾಸ್, ಉದ್ಯಾನವನ ಸಮಿತಿಯ ರಘುರಾಜ್ ಕದ್ರಿ, ಮಮತಾ ಶೆಟ್ಟಿ, ದೇವಿ ಪ್ರಸಾದ್ ಕದ್ರಿ, ಸ್ಥಳೀಯರಾದ ರಾಘವೇಂದ್ರ ಆಚಾರ್, ವೇಣು ಶರ್ಮ ಉಪಸ್ಥಿತರಿದ್ದರು.
ಉದ್ಯಾನವನದ ಅಧ್ಯಕ್ಷ, ಪಾಲಿಕೆ ಸದಸ್ಯ ಪ್ರಕಾಶ್ ಬಿ. ಸಾಲ್ಯಾನ್ ಸ್ವಾಗತಿಸಿದರು.







