ಮನಪಾ ವಿಪಕ್ಷ ನಾಯಕಿಯ ಕ್ರಮ ಸರಿ: ಬಿಜೆಪಿ
ಮಂಗಳೂರು, ಜ.17: ಸರ್ಕ್ಯೂಟ್ ಹೌಸ್‌ನಿಂದ ಕದ್ರಿ ಉದ್ಯಾನವನದ ಮೂಲಕ ಪದುವಾ ಹೈಸ್ಕೂಲ್ ಎದುರುಗಟೆ ರಾ.ಹೆ. ಸೇರುವ ರಸ್ತೆಗೆ ಸ್ವಾಮಿ ವಿವೇಕಾನಂದ ರಸ್ತೆ ಎಂಬ ನಾಮಫಲಕ ಅನಾವರಣ ಮಾಡಿರುವ 32ಬೆ ಕದ್ರಿ ಉತ್ತರ ವಾರ್ಡ್‌ನ ಕಾರ್ಪೊರೇಟರ್ ರೂಪಾ ಡಿ. ಬಂಗೇರಾರ ಕ್ರಮ ಸರಿಯಾಗಿದೆ ಎಂದು ವಾರ್ಡ್ ಬಿಜೆಪಿ ಪ್ರಕಟನೆಯಲ್ಲಿ ತಿಳಿಸಿದೆ.
ಕದ್ರಿ ರಸ್ತೆಗೆ ಸ್ವಾಮಿ ವಿವೇಕಾನಂದ ರಸ್ತೆ ಎಂಬ ಹೆಸರು ನೂರಾರು ವರ್ಷದಿಂದ ಚಾಲ್ತಿಯಲ್ಲಿತ್ತು. ನಂತೂರಿನ ಅಡ್ಡರಸ್ತೆಗೆ ಸ್ವಾಮಿ ವಿವೇಕಾನಂದ ಅಡ್ಡರಸ್ತೆ ಎಂಬ ನಾಮಫಲಕವಿದೆ. ಹಾಗಾದರೆ ವಿವೇಕಾನಂದ ಮುಖ್ಯ ರಸ್ತೆ ಯಾವುದು ಎಂಬುದನ್ನು ಮೇಯರ್ ಸ್ಪಷ್ಟಪಡಿಸಲಿ ಎಂದು ಬಿಜೆಪಿ ಸವಾಲು ಹಾಕಿದೆ.
ಈ ರಸ್ತೆಗೆ ಅನಧಿಕೃತವಾಗಿ ನಾಮಫಲಕ ಅಳವಡಿಸಲಾಗಿದೆ ಎಂದು ಮೇಯರ್ ಹೇಳಿಕೆ ನೀಡಿದ್ದಾರೆ. ಹಾಗಿದ್ದರೆ ಈ ಹಿಂದೆ ಇದ್ದ ಜೋಗಿ ಮಠ ರಸ್ತೆಗೆ ಮನಪಾ ಅಧಿಕೃತ ರಸ್ತೆ ಎಂಬುದಕ್ಕೆ ಸಾಕ್ಷಿ ಇದೆಯೇ? ಈ ಬಗ್ಗೆ ಪಾಲಿಕೆಯಲ್ಲಿ ನಿರ್ಣಯವಾಗಿದೆಯೇ? ಒಂದು ಆ ಬಗ್ಗೆ ದಾಖಲೆ ಬಿಡುಗಡೆ ಮಾಡಿದರೆ ಪಾಲಿಕೆಯ ನಿರ್ಣಯವನ್ನು ಗೌರವಿಸಿ ಅದೇ ನಾಮಫಲಕ ಅಳವಡಿಸಲು ಸಹಕರಿಸುವುದಾಗಿ ಬಿಜೆಪಿ ತಿಳಿಸಿದೆ.





