ದಲಿತರ ಪ್ರತಿಭಟನೆಗೆ ತೆರೆ ಎಳೆದಿದ್ದ ಹಿನ್ನೆಲೆ : ಎಸಿಯಿಂದ ಗುರುಂಪುನಾರ್ ರಸ್ತೆ ಸ್ಥಳ ಪರಿಶೀಲನೆ
ಪುತ್ತೂರು,ಜ.17 : ಪುತ್ತೂರು ನಗರದ ಪಡ್ನೂರು-ಬನ್ನೂರು ಗ್ರಾಮ ವ್ಯಾಪ್ತಿಗೊಳಪಟ್ಟ ಮೂವಪ್ಪು- ಗುರುಂಪುನಾರ್ ರಸ್ತೆ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿ ನಾಳೆ ಬೆಳಿಗ್ಗೆಯೇ ಸ್ಥಳಕ್ಕೆ ಭೇಟಿ ನೀಡುವ ಭರವಸೆ ನೀಡಿ ದಲಿತ್ ಸೇವಾ ಸಮಿತಿಯವರು ಪುತ್ತೂರಿನ ಮಿನಿ ವಿಧಾನಸೌಧದ ಬಳಿ ಸೋಮವಾರ ಹಮ್ಮಿಕೊಂಡಿದ್ದ ಹಗಲು ರಾತ್ರಿ ಪ್ರತಿಭಟನೆಗೆ ಸೋಮವಾರ ರಾತ್ರಿ ವೇಳೆ ತೆರೆ ಎಳೆದಿದ್ದ ಉಪವಿಭಾಗಾಧಿಕಾರಿ ಡಾ.ರಘುನಂದನ್ ಮೂರ್ತಿ ಅವರು ನೀಡಿದ ಭರವಸೆಯಂತೆ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪುತ್ತೂರು ಉಪವಿಭಾಗಾಧಿಕಾರಿ ಡಾ. ರಘುನಂದನ್ ಮೂರ್ತಿ ಅವರು ಸೋಮವಾರ ಸಂಜೆ ತಹಶೀಲ್ದಾರ್ ಅನಂತಶಂಕರ್ ಅವರ ಉಪಸ್ಥಿತಿಯಲ್ಲಿ ಪ್ರತಿಭಟನಾನಿರತ ದಲಿತ ಮುಖಂಡರ ಜೊತೆಗೆ ಮಾತುಕತೆ ನಡೆಸಿ ನಡೆಸಿದ್ದರು. ಆ ವೇಳೆ ದಲಿತ ಮುಖಂಡರಿಟ್ಟ ಬೇಡಿಕೆಯಂತೆ ಗುರುಂಪುನಾರ್ ರಸ್ತೆ ಸ್ಥಳಕ್ಕೆ ಮಂಗಳವಾರ ಬೆಳಿಗ್ಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುವ ಭರವಸೆ ನೀಡಿದ್ದರು. ಅಲ್ಲದೆ ಡಿಸಿ ಮನ್ನಾ ಜಾಗದ ಒತ್ತುವರಿ ತೆರವು , ಸ್ಥಳ ಅಳತೆ ಮಾಡಿಸುವ ಕುರಿತು ಭರವಸೆ ನೀಡಿದ್ದರು. ಈ ಹಿನ್ನಲೆಯಲ್ಲಿ ದಲಿತ್ ಸೇವಾ ಸಮಿತಿಯವರು ಹಗಲು ರಾತ್ರಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿದ್ದರು.
ಉಪವಿಭಾಗಾಧಿಕಾರಿಗಳು ದಲಿತ್ ಸೇವಾ ಸಮಿತಿಯ ಮುಖಂಡರಿಗೆ ನೀಡಿದ ಭರವಸೆಯಂತೆ ಮಂಗಳವಾರ ಖುದ್ದಾಗಿ ಗುರುಂಪುನಾರ್ ರಸ್ತೆ ನಿರ್ಮಾಣದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುತ್ತೂರು ನಗರ ಠಾಣೆಯ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್, ಎಸ್‌ಐ ಓಮನಾ ಇದ್ದರು.





