ಕಮಲ್ ದೇಶ ತೊರೆಯಬೇಕೆನ್ನುವ ಅಧಿಕಾರ ಯಾರಿಗೂ ಇಲ್ಲ: ಆಡೂರ್ ಗೋಪಾಲಕೃಷ್ಣನ್

ತಿರುವನಂತಪುರಂ, ಜ.18: ನಿರ್ದೇಶಕ ಕಮಲ್ ದೇಶ ತೋರೆಯಬೇಕೆನ್ನುವ ಅಧಿಕಾರ ಯಾರಿಗೂ ಇಲ್ಲ. ಅವರಿಗೆ ಈ ಅಧಿಕಾರವನ್ನು ಯಾರು ಕೊಟ್ಟಿದ್ದಾರೆಂದು ಪ್ರಶಸ್ತಿ ವಿಜೇತ ಸಿನೆಮಾ ನಿರ್ದೇಶಕ ಆಡೂರ್ ಗೋಪಾಲಕೃಷ್ಣನ್ ಆಕ್ರೋಶದಿಂದ ಪ್ರಶ್ನಿಸಿದ್ದಾರೆ.
ದೇಶ ಪ್ರೇಮ, ರಾಷ್ಟ್ರೀಯತೆಗಳು ಯಾವುದಾದರೊಂದು ಪಕ್ಷದ ಗುತ್ತಿಗೆಯಲ್ಲ. ಕಮಲ್‌ರನ್ನು ಕೋಮುವಾದಿ ಎನ್ನುವುದು ಬಹುದೊಡ್ಡ ಪಾತಕವಾಗಿದೆ. ಕೇರಳಕ್ಕೆ ಅಪಮಾನಕರವೂ ಆಗಿದೆ.ಬರಹಗಾರರು ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಮುಂದಾಳುತ್ವದಲ್ಲಿ ಇಲ್ಲಿನ ಗಾಂಧಿ ಪಾರ್ಕಿನಲ್ಲಿ ಆಯೋಜಿಸಲಾದ ಮಾನವ ಜಾಗೃತಿ ಎನ್ನುವ ಪ್ಯಾಶಿಸ್ಟ್ ವಿರೋಧಿ ಸಾಂಸ್ಕೃತಿಕ ಕೂಟವನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.
ಪೂರ್ವ ಸಿದ್ಧತೆಗಳಿಲ್ಲದೆ ನೋಟು ಅಮಾನ್ಯಗೊಳಿಸಿದ್ದು ಜನರನ್ನು ಸಂಕಷ್ಟಕ್ಕೀಡು ಮಾಡಿರುವುದು ನಿಜ. ಎಂಟಿ ವಾಸುದೇವನ್ ನಾಯರ್ ಹೇಳಿದ ಈ ಸತ್ಯದಲ್ಲಿ ಎಂತಹ ಅಪರಾಧವಿದೆ ಎಂದು ಪ್ರಶ್ನಿಸಿದ ಆಡೂರ್ ಪ್ರಮುಖ ವ್ಯಕ್ತಿಗಳ ವಿರುದ್ಧ ಬೆರಳೆತ್ತಿ ಆರೋಪಿಸುವವರು ತಾವು ಕೂಡಾ ಪ್ರತ್ಯುತ್ತರವನ್ನು ಎದುರಿಸಲೇಬೇಕು ಎಂದು ಅರಿತಿರಬೇಕು. ತೀರ್ಮಾನ ಮಾಡಿ ಇನ್ನು ಯಾರೂ ಮಾತಾಡಬಾರದು ಎಂದು ಹೇಳುವ ಅಧಿಕಾರ ಯಾರಿಗೂ ನೀಡಲಾಗಿಲ್ಲ. ಆರೋಪ ಹೋರಿಸಿದವರು ಹೇಳಿಕೆ ಹಿಂಪಡೆದು ವಿಷಾದ ವ್ಯಕ್ತಪಡಿಸಬೇಕೆಂದು ಆಡೂರ್ ಹೇಳಿದ್ದಾರೆ.
ಚಲನಚಿತ್ರೋತ್ಸವದಲ್ಲಿ ರಾಷ್ಟ್ರಗೀತೆ ಹಾಡುವಾಗ ಜನರಲ್ಲಿ ಎದ್ದು ನಿಲ್ಲಲು ಕಮಲ್ ಹೇಳುತ್ತಿರುವುದನ್ನು ನಾನು ನೋಡಿದ್ದೇನೆ. ಪೊಲೀಸರ ಕ್ರಮಗಳಿಂದ ದೇಶಪ್ರೇಮವನ್ನು ದೃಢಪಡಿಸಲಾಗದು. ಕೇರಳದಲ್ಲಿ ಸಂಘಪರಿವಾರ ಶಕ್ತಿಗಳ ಹಾರಾಟಕ್ಕೆ ದಿಲ್ಲಿಯಲ್ಲಿ ತಾವು ಅಧಿಕಾರದಲ್ಲಿರುವುದು ಕಾರಣವೇ ಎಂದು ಬರಹಗಾರ ಝಕರಿಯ ಪ್ರಶ್ನಿಸಿದರು.
ಎಂಟಿ ಹಾಗೂ ಕಮಲ್ ವಿರುದ್ಧ ಬೆದರಿಕೆಗಳು ಸಾಂಸ್ಕೃತಿಕ ಜೀವನದ ಸ್ವತಂತ್ರ ಪ್ರಜ್ಞೆಗೆ ಬಿದ್ದಿರುವ ತ್ರಿಶೂಲ ಏಟಾಗಿದೆ ಎಂದು ಪೆರುಂಪಡವಂ ಶ್ರೀಧರನ್ ಹೇಳಿದ್ದಾರೆ. ಕಮಲ್‌ರನ್ನು ಪಾಕಿಸ್ತಾನಕ್ಕೆ ಹೋಗಲು ಹೇಳುವವರನ್ನು ಯಾವುದೇ ಮಾನವ ಸಂಸ್ಕಾರವಿರುವ ರಾಷ್ಟ್ರಕ್ಕೂ ಕಳುಹಿಸಲು ಸಾಧ್ಯವಿಲ್ಲ ಎಂದು ಟಿವಿ ಚಂದ್ರನ್ ಹೇಳಿದರು.
ಕರಿಪ್ಪುಯ ಶ್ರೀಕುಮಾರ್, ಡಾ.ಬಿ.ಇಕ್ಬಾಲ್, ಬೀನಾಪಾಲ್,ಭಾಗ್ಯಲಕ್ಷ್ಮಿ, ಜಿ. ಶಂಕರ್, ಡಾ. ಬಿಜು, ನೀಲನ್ ಡಾ. ನೀನಾ ಪ್ರಸಾದ್, ಜಿಎಸ್ ಪ್ರದೀಪ್, ನೇಮಂ ಪುಷ್ಪರಾಜ್, ವಿ.ಎನ್. ಮುರಳಿ, ವಸಂತಕುಮಾರ್ ಸಾಂಬಾಶಿವನ್, ಸುಜ ಸೂಸನ್ ಜಾರ್ಜ್ ಮುಂತಾದವರು ಹಾಜರಿದ್ದರೆಂದು ವರದಿ ತಿಳಿಸಿದೆ.







