ಶಾಲಾ, ಕಾಲೇಜುಗಳಲ್ಲಿ ಮೋದಿ, ವಿವೇಕಾನಂದರ ಫೋಟೋ ಕಡ್ಡಾಯ, ಇಡದಿದ್ದರೆ ಕ್ರಮ!
ಮಧ್ಯ ಪ್ರದೇಶ ಸರ್ಕಾರದ ಆದೇಶ

ಭೋಪಾಲ್, ಜ.18: ಮಧ್ಯ ಪ್ರದೇಶದ ಬಿಜೆಪಿ ನೇತೃತ್ವದ ಸರ್ಕಾರ ಹೊಸ ಆದೇಶ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ರಾಜ್ಯದ ಎಲ್ಲಾ ಸರಕಾರಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸ್ವಾಮಿ ವಿವೇಕಾನಂದರ ಫೋಟೋ ಇಡುವುದನ್ನು ಇಲ್ಲಿನ ಸರ್ಕಾರ ಕಡ್ಡಾಯಗೊಳಿಸಿದೆ. ಈ ಆದೇಶ ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳು ಶಿಸ್ತು ಕ್ರಮ ಎದುರಿಸಲಿವೆ ಎಂದು ಸರ್ಕಾರ ಎಚ್ಚರಿಸಿದೆ.
ರಾಜ್ಯದ ಉನ್ನತ ಶಿಕ್ಷಣ ಸಚಿವ ಜೈಭನ್ ಸಿಂಗ್ ಪವೈಯ್ಯ ನೀಡಿದ ಆದೇಶದ ಪ್ರಕಾರ ಶಾಲೆಗಳಿಂದ ಹಿಡಿದು ವಿಶ್ವವಿದ್ಯಾಲಯದ ತನಕದ ಎಲ್ಲಾ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಮೋದಿ, ವಿವೇಕಾನಂದ ಫೋಟೋಗಳ ಸಹಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮಹಾತ್ಮಾ ಗಾಂಧಿ ಹಾಗೂ ಅಂಬೇಡ್ಕರ್ ಅವರ ಫೋಟೋಗಳೂ ಕಡ್ಡಾಯವಾಗಿವೆ. ಎಲ್ಲಾ ಸರ್ಕಾರಿ ಶಾಲೆಗಳಿಗೆ ಹಾಗೂ ಶಿಕ್ಷಣ ಇಲಾಖೆಗಳಿಗೆ ಈ ಬಗ್ಗೆ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ.
ಈ ಆದೇಶ ವಿಪಕ್ಷಗಳಿಂದ ತೀವ್ರ ಟೀಕೆಗೊಳಗಾಗಿದ್ದು, ಸರ್ಕಾರ ಆರೆಸ್ಸೆಸ್ ಒತ್ತಡಕ್ಕೆ ಮಣಿದು ಇಂತಹ ಕ್ರಮ ಕೈಗೊಂಡಿದೆಯೆಂದು ಅವುಗಳು ದೂರಿವೆ. ಸ್ವಾಮಿ ವಿವೇಕಾನಂದರ ಸಿದ್ಧಾಂತ ಆರೆಸ್ಸೆಸ್ ಸಿದ್ಧಾಂತಕ್ಕೆ ತಾಳೆಯಾಗುವುದರಿಂದ ಅವರು ವಿವೇಕಾನಂದರ ಚಿತ್ರವನ್ನು ಶಾಲೆಗಳಲ್ಲಿ ಇಡುವುದು ಕಡ್ಡಾಯಗೊಳಿಸಿದ್ದಾರೆಂದು ಕಾಂಗ್ರೆಸ್ ವಕ್ತಾರ ಕೆ.ಕೆ.ಮಿಶ್ರಾ ಹೇಳಿದ್ದಾರೆ.
ಜನವರಿ 7ರಂದು ನೀಡಲಾದ ನೋಟಿಸ್ ನಂತೆ ಎಲ್ಲಾ ಸಂಸ್ಥೆಗಳು ಫೋಟೋಗಳನ್ನು ಹೊಸದಿಲ್ಲಿಯ ವಾರ್ತಾ ಮತ್ತು ಪ್ರಚಾರ ಸಚಿವಾಲಯದ ಕಚೇರಿಯಿಂದ ಪಡದುಕೊಳ್ಳಬಹುದು ಎಂದು ಹೇಳಲಾಗಿದೆ. ಕಡ್ಡಾಯವಾಗಿ ಸಚಿವಾಲಯದಿಂದಲೇ ಖರೀದಿಸಬೇಕಾಗಿದೆಯೆಂದೂ ಸುತ್ತೋಲೆಯಲ್ಲಿ ತಿಳಿಸಲಾಗಿದ್ದು, ಈ ಬಗ್ಗೆ 2004 ಜನವರಿಯಲ್ಲಿ ವಾಜಪೇಯಿ ಆಡಳಿತ ಸಂದರ್ಭ ಜಾರಿಗೊಳಿಸಲಾದ ಆದೇಶವೊಂದನ್ನು ಕೂಡ ಉಲ್ಲೇಖಿಸಲಾಗಿದೆ.







