ಆರು ಮಂದಿಗೆ ಕೊಂಕಣಿ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ: ಫೆ.12ರಂದು ಪ್ರಶಸ್ತಿ ಪ್ರದಾನ

ಮಂಗಳೂರು, ಜ.18:ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ 2016ನೆ ಸಾಲಿನ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪುರಸ್ಕೃತರ ಪಟ್ಟಿಯನ್ನು ಬುಧವಾರ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅಕಾಡಮಿಯ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ ಬಿಡುಗಡೆಗೊಳಿಸಿದರು.
ಗೌರವ ಪ್ರಶಸ್ತಿಗೆ ಮಂಗಳೂರಿನ ಸಿರಿಲ್ ಜಿ. ಸಿಕ್ವೇರಾ (ಸಾಹಿತ್ಯ), ಶಿರಸಿಯ ವಾಸುದೇವ ಬಾಲಕೃಷ್ಣ ಶಾನಭಾಗ್ (ಕಲೆ), ಯಲ್ಲಾಪುರದ ಕ್ಲಾರಾ ಅಂತೋನ್ ಸಿದ್ದಿ (ಜಾನಪದ) ಆಯ್ಕೆಯಾಗಿದ್ದಾರೆ. ಪುಸ್ತಕ ಬಹುಮಾನಕ್ಕೆ ಕಾಸರಗೋಡು ಚಿನ್ನಾ (ಭಾಷಾಂತರ ವಿಭಾಗ- ತೀಸ್ ಕಾಣಿಯೊ), ಉಮೇಶ್ ನಾಯಕ್ ಕೆ. (ಕವನ ವಿಭಾಗ- ಶ್ರೀನಿವಾಸ ಕಲ್ಯಾಣ), ಆಗ್ನೇಸಿಯಾ ಫ್ರೇಂಕ್ ಬಿ.ಎಸ್. (ಅಧ್ಯಯನ ವಿಭಾಗ- ಅಮೃತ್ ತುಜ್ಯಾ ಹಾತಿಂ) ಆಯ್ಕೆಯಾಗಿದ್ದಾರೆ.
ಗೌರವ ಪ್ರಶಸ್ತಿಗೆ ತಲಾ 50 ಸಾವಿರ ರೂ. ಮತ್ತು ಪುಸ್ತಕ ಬಹುಮಾನಕ್ಕೆ ತಲಾ 25 ಸಾವಿರ ರೂ.ವನ್ನು ನೀಡಲಾಗುತ್ತದೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಫೆ.12ರಂದು ಸಂಜೆ 6 ಗಂಟೆಗೆ ನಗರದ ಪುರಭವನದಲ್ಲಿ ನಡೆಯಲಿದೆ. ಮುಖ್ಯಯಂತ್ರಿ ಸಿದ್ದರಾಮಯ್ಯ ಗೌರವ ಪ್ರಶಸ್ತಿಯನ್ನೂ, ಸಚಿವೆ ಉಮಾಶ್ರೀ ಪುಸ್ತಕ ಪುರಸ್ಕಾರವನ್ನೂ ಪ್ರದಾನ ಮಾಡಲಿದ್ದಾರೆ.
ಅತಿಥಿಗಳಾಗಿ ಮಂಗಳೂರು ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ, ನಾಗಲ್ಯಾಂಡ್ ಮತ್ತು ತ್ರಿಪುರಾ ರಾಜ್ಯಪಾಲ ಪಿ.ಬಿ. ಆಚಾರ್ಯ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಗೋವಾದ ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ್ ಭಾಗವಹಿಸಲಿದ್ದಾರೆ.
*ಸಿರಿಲ್ ಜಿ.ಸಿಕ್ವೇರಾ:
65ರ ಹರೆಯದ ಇವರು ತನ್ನ 12ನೆ ವಯಸ್ಸಿನಲ್ಲೇ ಬರವಣಿಗೆ ಆರಂಭಿಸಿದ್ದರು. ಕಳೆದ 50 ವರ್ಷದಿಂದ ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ದುಡಿದಿದ್ದಾರೆ. ಸುಮಾರು 25ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ.
*ವಾಸುದೇವ ಬಾಲಕೃಷ್ಣ ಶಾನಭಾಗ್:
65ರ ಹರೆಯದ ಇವರು ಕೊಂಕಣಿ ರಂಗಭೂಮಿ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಕೊಂಕಣಿ ಆಡಿಯೋ ಸಿಡಿ ಹೊರತಂದಿದ್ದಾರೆ. ಕೊಂಕಣಿ ಚಲನಚಿತ್ರ ‘ಉಜ್ವಾಡು, ಜೀವನಾಂಚೊ ಖೇಳು’ವಿನಲ್ಲಿ ಅಭಿನಯಿಸಿದ್ದಾರೆ.
*ಕ್ಲಾರ ಅಂತೋನ್ ಸಿದ್ದಿ:
65ರ ಹರೆಯದ ಇವರು ಅನಕ್ಷರಸ್ಥರಾದರೂ ಜಾನಪದ ಹಾಡುಗಳನ್ನು ನೃತ್ಯಕ್ಕೆ ಅಳವಡಿಸಿದ್ದಾರೆ. ಅಂಗವೈಕಲ್ಯವನ್ನು ಮರೆತು ಹಲವು ಸಂಘಟನೆಗಳಲ್ಲಿ ಸಿದ್ದಿ ಜಾನಪದ ನೃತ್ಯ ಪ್ರದರ್ಶಿಸಿದ್ದಾರೆ.







