ಹುಡುಗಿ ಜೊತೆ ಮಾತನಾಡಿದ ತಪ್ಪಿಗೆ ಯುವಕನಿಗೆ ಚಪ್ಪಲಿಹಾರ, ಥಳಿತ

ತುಮಕೂರು, ಜ.18: ಯುವತಿಯೊಬ್ಬಳ ಜೊತೆ ದಲಿತ ಯುವಕನೊಬ್ಬ ಮಾತನಾಡಿದ ತಪ್ಪಿಗೆ ಆತನನ್ನು ಹಿಡಿದು ಚಪ್ಪಲಿ ಹಾರ ಹಾಕಿ,ಚೆನ್ನಾಗಿ ಥಳಿಸಿ, ವಿವಸ್ತ್ರಗೊಳಿಸಿ ಕೈಯಲ್ಲಿ ಸ್ಲೇಟು ಕೊಟ್ಟು ಅಮಾನವೀಯವಾಗಿ ವರ್ತಿಸಿದ ಘಟನೆ ತುಮಕೂರಿನ ಗುಬ್ಬಿಯಲ್ಲಿ ನಡೆದಿದೆ.
ಪೇಂಟಿಂಗ್ ಕೆಲಸ ಮಾಡುತ್ತಿದ್ದ. ಯುವಕ ಅಭಿಷೇಕ್ ಗುಬ್ಬಿ ಪಟ್ಟಣದ ಸುಭಾಷ್ ನಗರದ ನಿವಾಸಿ. ಸ್ಥಳೀಯ ನಿವಾಸಿ ಪ್ರಕಾಶ್ ಎಂಬವರ ಮಗಳು ಎಸ್.ಎಸ್.ಎಲ್.ಸಿ ಓದುತ್ತಿದ್ದು, ಅಭಿಷೇಕ್ ಆಕೆಯ ಜೊತೆ ಮಾತನಾಡುತ್ತಿರುವ ವಿಚಾರ ಗೊತ್ತಾಗಿ ಆಕೆಯ ಮನೆ ಮಂದಿ ಸಿಟ್ಟಾಗಿದ್ದರು. ಇದಕ್ಕಾಗಿ ಯುವತಿ ತಂದೆ ಸೇರಿದಂತೆ 10 ಮಂದಿ ಅಭಿಷೇಕ್ ನನ್ನು ಹಿಡಿದು ಆತನಿಗೆ ಥಳಿಸಿದ್ದಾರೆ. "ಗುಬ್ಬಿ ಹುಡುಗಿಯರನ್ನು ಕೆಣಕಿದರೆ ಇದೇ ಗತಿ’’ ಎಂದು ಬರೆಸಿ ಆತನ ಕೈಲಿ ಸ್ಲೇಟ್ ಹಿಡಿಸಿದ್ದಾರೆ ಎಂದು ತಿಳಿದು ಬಂದಿದೆ. ಇದರ ಫೋಟೋ ಹಾಗೂ ವೀಡಿಯೊ ಈಗ ವಾಟ್ಸಪ್ ಮೂಲಕ ಹರಿದಾಡತೊಡಗಿದೆ .
ಈ ಘಟನೆಗೆ ಸಂಬಂಧಿಸಿದಂತೆ ಯುವಕನ ತಂದೆ ಗುಬ್ಬಿ ಠಾಣೆಗೆ ದೂರು ನೀಡಿದ್ದಾರೆ.
Next Story





