ಈ ಭಾರತೀಯ ಟೆಲಿಕಾಂ ಕಂಪನಿ ಫೆ.15ಕ್ಕೆ ತನ್ನ ಬಾಗಿಲು ಮುಚ್ಚಲಿದೆ !

ಹೊಸದಿಲ್ಲಿ,ಜ.18: ಭಾರತದಲ್ಲಿ ಟಿಲಿಕಾಂ ಕಂಪನಿಗಳ ಪೈಕಿ ಅತ್ಯಂತ ಸಣ್ಣದಾಗಿರುವ ವೀಡಿಯೊಕಾನ್ ಟೆಲಿಕಾಂ ಫೆಬ್ರವರಿ 15ರ ಮಧ್ಯರಾತ್ರಿಯಿಂದ ಪಂಜಾಬ್ ವಲಯ ದಲ್ಲಿ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಲಿದೆ ಮತ್ತು ಇದರೊಂದಿಗೆ ದೇಶದಲ್ಲಿ ತನ್ನ ಮೊಬೈಲ್ ಫೋನ್‌ಸೇವೆಗಳಿಗೆ ಅಂತ್ಯ ಹಾಡಲಿದೆ. ಸೇವೆ ಮುಂದುವರಿಯುವಂತಾಗಲು ಇತರ ಟೆಲಿಕಾಂ ಕಂಪನಿಗಳಿಗೆ ವರ್ಗಾವಣೆಗೊಳ್ಳುವಂತೆ ಅದು ತನ್ನ 30 ಲಕ್ಷ ಗ್ರಾಹಕರಿಗೆ ಸೂಚಿಸಿದೆ.
ಪ್ರಿಪೇಡ್ ಗ್ರಾಹಕರು ಫೆ.15ರೊಳಗೆ ತಮ್ಮ ಬ್ಯಾಲನ್ಸ್‌ನ್ನು ಪೂರ್ಣವಾಗಿ ಖಾಲಿ ಮಾಡಿಕೊಳ್ಳಬೇಕು ಮತ್ತು ಪೋಸ್ಟ್‌ಪೇಡ್ ಗ್ರಾಹಕರು ಬೇರೆ ಟೆಲಿಕಾಂ ಕಂಪನಿಗಳಿಗೆ ಬದಲಿಸಿಕೊಳ್ಳುವ ಮುನ್ನ ಬಾಕಿಯಿರುವ ಬಿಲ್‌ಗಳನ್ನು ಪಾವತಿಸಬೇಕಾಗುತ್ತದೆ ಎಂದು ಕ್ವಾಡ್ರಂಟ್ ಟೆಲಿವೆಂಚರ್ಸ್ ಹೆಸರಿನಲ್ಲಿ ಕಾರ್ಯಾಚರಿಸುತ್ತಿರುವ ಕಂಪನಿಯು ಮಂಗಳವಾರ ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ.
ಕಂಪನಿಯ ಈ ಕ್ರಮದಿಂದಾಗಿ ಪಂಜಾಬ್‌ನಲ್ಲಿ ಮೊಬೈಲ್ ಸೇವಾ ವಿಭಾಗದಲ್ಲಿಯ 100 ನೌಕರರು ತಮ್ಮ ಕೆಲಸಗಳನ್ನು ಕಳೆದುಕೊಳ್ಳಲಿದ್ದಾರೆ. ಇವರಿಗೆ ವೀಡಿಯೊಕಾನ್ ರಾಜ್ಯದಲ್ಲಿಯ ತನ್ನ ಇತರ ಘಟಕಗಳಲ್ಲಿ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಸಾಧ್ಯತೆಯಿದೆ ಎಂದು ಕಂಪನಿಯ ಯೋಜನೆಯನ್ನು ಬಲ್ಲ ಮೂಲಗಳು ತಿಳಿಸಿವೆ. ವೀಡಿಯೊಕಾನ್ ಪಂಜಾಬ್‌ನಲ್ಲಿ ತನ್ನ ವಿವಿಧ ಘಟಕಗಳಲ್ಲಿ ಸುಮಾರು 4,000 ಉದ್ಯೋಗಿಗಳನ್ನು ಹೊಂದಿದೆ.
ಟೆಲಿಕಾಂ ವ್ಯವಹಾರದಲ್ಲಿ ವೀಡಿಯೊಕಾನ್ ಸಾಕಷ್ಟು ನಷ್ಟವನ್ನು ಅನುಭವಿಸಿದೆ. ವಲಯದಲ್ಲಿ ತನ್ನ ಸ್ಪೆಕ್ಟ್ರಂ ಹೋಲ್ಡಿಂಗ್ 2027ವರೆಗೆ ಮುಂದುವರಿಯುತ್ತದೆ ಎನ್ನುವುದು ಅದಕ್ಕೆ ಖಾತ್ರಿಯಿಲ್ಲ. ಹೀಗಾಗಿ ಅದು ಇನ್ನಷ್ಟು ಹೂಡಿಕೆಯನ್ನು ಮಾಡಲು ಆಸಕ್ತಿಯನ್ನು ಹೊಂದಿಲ್ಲ ಎಂದು ಮೂಲಗಳು ತಿಳಿಸಿವೆ. ಮೊಬೈಲ್ ಸೇವೆಯನ್ನು ಸ್ಥಗಿತಗೊಳಿಸುವ ತನ್ನ ನಿರ್ಧಾರಕ್ಕೆ ಯಾವುದೇ ಕಾರಣವನ್ನು ವೀಡಿಯೊಕಾನ್ ನೀಡಿಲ್ಲ. ಆದರೆ ಕಂಪನಿಯು ಸ್ಪೆಕ್ಟ್ರಂ ಆಧಾರಿತ ಉದ್ಯಮದಿಂದ ಹೊರಬೀಳುತ್ತಿದೆ ಎಂದು ಅದರ ಸಿಇಒ ಅರವಿಂದ ಬಾಲಿ ಖಚಿತಪಡಿಸಿದ್ದಾರೆ.
2008ರಲ್ಲಿ ರಾಷ್ಟ್ರಾದ್ಯಂತ 17 ವಲಯಗಳಲ್ಲಿ ಪರವಾನಿಗೆಗಳು ಮತ್ತು ಸ್ಪೆಕ್ಟ್ರಂಗಳನ್ನು ಪಡೆದುಕೊಂಡಿದ್ದ ವೀಡಿಯೊಕಾನ್ 2012ರಲ್ಲಿ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ತನ್ನೆಲ್ಲ ಪರವಾನಿಗೆಗಳನ್ನು ಕಳೆದುಕೊಂಡಿತ್ತು. ನಂತರ ಹರಾಜಿನಲ್ಲಿ ಆರು ವಲಯಗಳಿಗೆ ಸ್ಪೆಕ್ಟ್ರಂ ಮರಳಿ ಪಡೆದುಕೊಂಡಿತ್ತು.







