ಮುಖ್ಯಮಂತ್ರಿ ವಿರುದ್ಧ ಸ್ಪರ್ಧೆ : ಇರೋಮ್ ಶರ್ಮಿಳಾ

ಇಂಫಾಲ, ಜ.18: ತನ್ನ 16 ವರ್ಷಗಳ ಉಪವಾಸ ಸತ್ಯಾಗ್ರಹದಿಂದ ಸುದ್ದಿಯಾಗಿದ್ದ ಮಣಿಪುರದ ಕಾರ್ಯಕರ್ತೆ ಇರೋಮ್ ಶರ್ಮಿಳಾ ಇದೀಗ ಚುನಾವಣಾ ಕಣ ಪ್ರವೇಶಿಸಲು ಸಜ್ಜಾಗಿದ್ದು ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸಾರ್ವಜನಿಕ ದೇಣಿಗೆಯ ಮೂಲಕ ನಿಧಿ ಸಂಗ್ರಹಿಸಿ ಮುಖ್ಯಮಂತ್ರಿ ಇಬೋಬಿ ಸಿಂಗ್ ವಿರುದ್ಧ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
ಸ್ವಚ್ಛ ಮತ್ತು ಪಾರದರ್ಶಕ ಚುನಾವಣಾ ಪ್ರಕ್ರಿಯೆಯ ಸಂದೇಶವಾಗಿ ತಾನು ಚುನಾವಣಾ ವೆಚ್ಚಕ್ಕಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲು ನಿರ್ಧರಿಸಿರುವುದಾಗಿ ಅವರು ತಿಳಿಸಿದ್ದಾರೆ. ಮುಖ್ಯಮಂತ್ರಿ ಇಬೋಬಿ ಸಿಂಗ್ 2006ರಿಂದ ಪ್ರತಿನಿಧಿಸುತ್ತಿರುವ ಥೌಬಾಲ್ ಕ್ಷೇತ್ರದಿಂದ ಸ್ಪರ್ಧಿಸುವುದಾಗಿಯೂ ಅವರು ತಿಳಿಸಿದ್ದಾರೆ. ಶರ್ಮಿಳಾ ಉಪವಾಸ ಸತ್ಯಾಗ್ರಹ ಕೈಬಿಟ್ಟ ಬಳಿಕ ರಾಜಕೀಯ ರಂಗ ಪ್ರವೇಶಿಸಿದ್ದರು.
ಪೀಪಲ್ಸ್ ರಿಸರ್ಜೆನ್ಸ್ ಆ್ಯಂಡ್ ಜಸ್ಟಿಸ್ ಅಲಯನ್ಸ್(ಪಿಆರ್‌ಜೆಎ) ಪಕ್ಷ ಸ್ಥಾಪಿಸಿರುವ ಶರ್ಮಿಳಾ ಮತ್ತು ಪಕ್ಷದ ಸದಸ್ಯರು ಸಾರ್ವಜನಿಕ ನಿಧಿ ಸಂಗ್ರಹದ ಉದ್ದೇಶವನ್ನು ಅಂತರ್ಜಾಲದ ಮೂಲಕ ಮತದಾರರಿಗೆ ತಲುಪಿಸುವ ಮತ್ತು ಪಕ್ಷದ ಪರ ಪ್ರಚಾರ ನಡೆಸುವ ಯೋಜನೆ ರೂಪಿಸಿದ್ದಾರೆ. ಧನಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಸಾರ್ವಜನಿಕ ದೇಣಿಗೆ ಸಂಗ್ರಹಿಸುವ ಯೋಜನೆ ರೂಪಿಸಲಾಗಿದೆ ಎಂದು ಶರ್ಮಿಳಾ ಎನ್‌ಡಿಟಿವಿಗೆ ತಿಳಿಸಿದ್ದಾರೆ.
ರಾಜಕೀಯ ದೇಣಿಗೆ ಪ್ರಕ್ರಿಯೆ ಏಕಸ್ವಾಮ್ಯ ಆಗಿರಬಾರದು. ಮಣಿಪುರದಂತಹ ಭ್ರಷ್ಟ ರಾಜ್ಯದಲ್ಲಿ ರಾಜಕೀಯ ದೇಣಿಗೆಯನ್ನು ಪ್ರಜಾಭಿಪ್ರಾಯಪರ ಗೊಳಿಸುವುದು ನಮ್ಮ ಗುರಿಯಾಗಿದೆ ಎಂದು ಪಕ್ಷದ ಸಂಯೋಜಕ ಎರೆಂಡ್ರೋ ಲೆಕೊಂಬಾಮ್ ತಿಳಿಸಿದ್ದಾರೆ.
ಸಾರ್ವಜನಿಕ ದೇಣಿಗೆ ಸಂಗ್ರಹಿಸುವ ತಮ್ಮ ಉದ್ದೇಶಕ್ಕಾಗಿ ಶರ್ಮಿಳಾ ಮುಂಬೈ ಮೂಲದ ‘ಕೆಟೋ’ ಎಂಬ ವೆಬ್‌ಸೈಟ್‌ನ ನೆರವು ಪಡೆಯಲು ಬಯಸಿದ್ದಾರೆ. ಈ ವೆಬ್‌ಸೈಟ್ 2012ರಿಂದ ವಿವಿಧ ಸಾಮಾಜಿಕ ಕಲ್ಯಾಣಾಭಿವೃದ್ಧಿಯ ಕಾರ್ಯಕ್ರಮಗಳಿಗೆ ನಿಧಿ ಸಂಗ್ರಹಿಸುವ ಕೆಲಸದಲ್ಲಿ ತೊಡಗಿಕೊಂಡಿದೆ. ಕನಿಷ್ಟ 50 ಲಕ್ಷ ಮೊತ್ತವನ್ನು ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿದೆ.
ಶರ್ಮಿಳಾ ಅವರ ಈ ಯೋಜನೆಯನ್ನು ಕಾಂಗ್ರೆಸ್ ಟೀಕಿಸಿದೆ. ಭ್ರಷ್ಟಾಚಾರವನ್ನು ಬುಡಮಟ್ಟದಿಂದ ಕಿತ್ತೊಗೆಯುವುದಾಗಿ ಹೇಳಿಕೊಂಡು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವ ಕಾರ್ಯ ಯಶಸ್ವಿಯಾಗದು ಎಂದು ಮಣಿಪುರ ಕಾಂಗ್ರೆಸ್ ವಕ್ತಾರ ಎನ್.ಬಿಜೋಯ್ ಸಿಂಗ್ ಹೇಳಿದ್ದಾರೆ.







